ಬೇಟೆಯ ಕಥೆಗಳು ಎಂದ ತಕ್ಷಣ ಎಲ್ಲರೂ ಪತ್ತೇದಾರಿ ಕಥೆಗಳ ರೋಮಾಂಚನವನ್ನು ನಿರೀಕ್ಷಿಸುತ್ತಾರೆ. ಆದರೆ ಕೆನೆತ್ ಆಂಡರ್ಸನ್ ಅವರ ಬೇಟೆಯ ಅನುಭವಗಳನ್ನು ಪೂರ್ಣಚಂದ್ರ ತೇಜಸ್ವಿಯರು ಕನ್ನಡಿಗರಿಗೆ ಪರಿಚಯಿಸಿದ ಮೇಲೆ ಎಲ್ಲರಿಗೂ ಕಾಡಿನ ನಿಗೂಢ ಮತ್ತು ಅದ್ಥುತ ಜಗತ್ತಿನ ಪರಿಚಯವಾಗತೊಡಗಿತು. ಕಾಡಿನಲ್ಲಿ ನಡೆಯುವ ಪ್ರತಿ ಚಲನೆಯನ್ನೂ ನಿಖರವಾಗಿ ಊಹಿಸಿ ಹೇಳಬಲ್ಲವರಾಗಿದ್ದರು ಕೆನೆತ್ ಆಂಡರ್ಸನ್. ಸರಳ ತಿಳಿ ಹಾಸ್ಯದ ಅವರ ವಿವರಣೆಗಳು ಮತ್ತು ಅವರು ನೀಡುವ ವ್ಯಕ್ತಿ ಹಾಗೂ ಜೀವನ ಚಿತ್ರಗಳು ಒಂದು ರಮ್ಯ ಕಾವ್ಯದಂತಿರುತ್ತವೆ. ಅಪಾಯಕಾರೀ ಮಟ್ಟದಲ್ಲಿ ಪರಿಸರ ನಾಶವಾಗುತ್ತಿರುವಾಗ ಮುಂದಿನ ತಲೆಮಾರುಗಳಲ್ಲಿ ಇನ್ನೊಬ್ಬ ಕೆನೆತ್ ಆಂಡರ್ಸನ್ ಹುಟ್ಟಿ ಬರುವುದು ಸಾಧ್ಯವೇ? ಕಾಡು ಮತ್ತು ವನ್ಯಜೀವಿಗಳ ಆಧ್ಯಯನವನ್ನು ಒಂದು ತಪಸ್ಸಿನಂತೆ ಜೀವನವಿಡೀ ಮಾಡಿದ ಕೆನೆತ್ ಆಂಡರ್ಸನ್ ಅವರು ಕನ್ನಡಿಗರಿಗೆ ಹೆಚ್ಚು ಪರಿಚಯವಾಗಬೇಕಿದೆ. ಅವರು ಉಪಯೋಗಿಸುವ ಇಂಗ್ಲಿಷ್ ಭಾಷೆಯ ನುಡಿಗಟ್ಟುಗಳಿಗೆ ಮತ್ತು ಅವರ ಶೈಲಿಗೆ ಕುಂದು ಬರದಂತೆ ಸಂಗ್ರಹಿಸಿ ಅನುವಾದಿಸುವುದು ಸವಾಲಿನ ಕೆಲಸ. ಇಲ್ಲಿ ತೇಜಸ್ವಿಯರ ಪ್ರಯತ್ನಗಳನ್ನು ಯಶಸ್ವಿಯಾಗಿ ಮುಂದುವರೆಸಲಾಗಿದೆ. ಈ ಎಲ್ಲ ಬರಹಗಳು “ಗೌರಿ ಲಂಕೇಶ್” ಪತ್ರಿಕೆಯಲ್ಲಿ ಪ್ರಕಟವಾಗಿವೆ. ಈ ಸಂಗ್ರಹದಲ್ಲಿ ಮೂರು ಬರಹಗಳಿವೆ. ಇವುಗಳಲ್ಲಿ ಒಂದು ಮಾತ್ರ ಬೇಟೆಯ ಕಥೆಯಾದರೆ, ಉಳಿದವು ಕಾಡಿನಲ್ಲಿ ನಡೆಯುವ ವಿಭಿನ್ನ ಅನುಭವಗಳನ್ನು ಕುರಿತಾದದ್ದು. ಮೊದಲ ಬರಹವನ್ನು Jungles Long Ago ಎನ್ನುವ ಪುಸ್ತಕದಿಂದ ಮತ್ತು ಉಳಿದೆರೆಡು ಬರಹಗಳನ್ನು Tales From The Indian Jungle ಎನ್ನುವ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ. ಅಳಿದುಳಿದ ಪರಿಸರವನ್ನು ರಕ್ಷಿಸಲು ನಮ್ಮ ಮಕ್ಕಳ ಕಾಳಜಿ ಮತ್ತು ಶ್ರಮ ಅಗತ್ಯವಾದದ್ದು ಎಂದು ನಾವು ಮರೆಯುವಂತಿಲ್ಲ. ಹಾಗಾಗಿ ಪೋಷಕರು ಈ ಪುಸ್ತಕವನ್ನು ಓದುವುದರ ಜೊತೆಗೆ ಮಕ್ಕಳಿಗೆ ಇಲ್ಲಿನ ಕಥೆಗಳನ್ನು ನಾಟಕೀಯವಾಗಿ ವರ್ಣಿಸಿ ಹೇಳಿದರೆ ಮುಂದಿನ ತಲೆಮಾರಿಗೆ ಪರಿಸರ ಮತ್ತು ವನ್ಯಜೀವಿಗಳ ಬಗೆಗೆ ಆಸಕ್ತಿ ಮತ್ತು ಅವುಗಳ ರಕ್ಷಣೆಯ ಅರಿವನ್ನು ಮೂಡಿಸಲು ಸಾಧ್ಯವಾಗಬಹುದು.
©2024 Book Brahma Private Limited.