‘ಸಮಕಾಲೀನ ಹಿಂದೀ ಕಥೆಗಳು’ ಕೃತಿಯು ವಿನೋದ ಬಾಯಿ ಅವರ ಕಥಾಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಬಿರುಕುಬಿಟ್ಟ ಬಯಲು ಒಣಭೂಮಿ ನಪುಂಸಕ ಪತಿಯಿಂದ ಸಂತಾನ ಅಪೇಕ್ಷಿಸುವ ಪತ್ನಿಯಂತ ಅಶಾಂತಿಯಿಂದ ನಗ್ನವಾಗಿ ಬಿದ್ದಿದೆ. ಬರಗಾಲ ಬಂದಿದೆ. ಹತ್ತಿರವೇ ಒಂದು ಹಸು, ಬರಗಾಲದ ಸುದ್ದಿಯಿರುವ ವೃತ್ತಪತ್ರಿಕೆಯನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದೆ. ಇದನ್ನು ಯಾರೋ ಸರ್ವೆ ಆಫೀಸರು ಎಸೆದು ಹೋಗಿರಬೇಕು. ಮನುಷ್ಯ ಈ ಈ ವಿಚಾರದಲ್ಲಿ ಹಸು ಎಮ್ಮೆಗಿಂತಲೂ ಕಳಪೆಯಾಗಿದ್ದಾನೆ. ಹಸುವಂತೂ ಈ ವೃತ್ತಪತ್ರಿಕೆಯನ್ನೂ ತಿನ್ನುತ್ತದೆ; ಆದರೆ ಮನುಷ್ಯ ಈ ವೃತ್ತ ಪತ್ರಿಕೆಯನ್ನು ತಿನ್ನಲಾರ, ಏಕೆಂದರೆ ಅದರಲ್ಲಿ ಕಾಳಿನ ಹಡಗು ಅಮೆರಿಕಾದಿಂದ ಹೊರಟುಬಿಟ್ಟಿದೆ ಎಂಬ ಸಮಾಚಾರವಿತ್ತು. ಅದನ್ನು ನಾನು ಹರಿದು ನೀರಿನೊಂದಿಗೆ ನುಂಗಿದೆ. ದಿನವಿಡೀ ನನಗೆ ಹಸಿವಾಗಲಿಲ್ಲ. ಈಗೀಗ ದಿನಪತ್ರಿಕೆಯ ಅರ್ಧಪುಟಗಳ ತುಂಬ, ಬರೀ ಬರಗಾಲ ಹಾಗೂ ಹಸಿವಿನಿಂದ ಸತ್ತವರ ಸುದ್ದಿಯೇ ಇರುತ್ತದೆ. ಬರಗಾಲದವನೊಬ್ಬ ರಸ್ತೆಯಲ್ಲಿ ಬಿದ್ದ ವೃತ್ತ ಪತ್ರಿಕೆಯನ್ನು ಎತ್ತಿ ಅಷ್ಟು ಪುಟವನ್ನು ತಿಂದರೆ ಅವನಿಗೆ ತಿಂಗಳು ಪೂರ್ತಿ ಹಸಿವಾಗುವುದಿಲ್ಲ. ಆದರೆ ಈ ದೇಶದವನು ಮೂರ್ಖ, ಅನ್ನ ತಿನ್ನಬೇಕೆನ್ನುತ್ತಾನೆ. ಹಸಿವಿನಿಂದ ಸತ್ತ ಸಮಾಚಾರವನ್ನು ತಿನ್ನಬಯಸುವುದಿಲ್ಲ. ಪ್ರತಿವರ್ಷ ವಸಂತ ಬರುತ್ತದೆ, ಪ್ರತಿ ವರ್ಷ ಶುಭ ಮಳೆ ಬರುತ್ತದೆ, ಪ್ರತಿವರ್ಷ ಶರದೋತ್ಸವವೂ ನಡೆಯುತ್ತದೆ. ಸ್ವಾತಂತ್ರ್ಯದಿನ ಮತ್ತು ಗಣತಂತ್ರ ದಿನಗಳಂತೆ ಪ್ರತಿವರ್ಷ ಬರಗಾಲವೂ ಬರುತ್ತದೆ. ಶರತ್ಕಾಲದಲ್ಲಿ ಯಾರೂ ಚಂದ್ರನನ್ನು 'ಹೇ ಅಮೃತ ಘಟವೇ, ಉತ್ಸವಕ್ಕಾಗಿ ಅಮೃತ ಸುರಿಸು” ಎಂದು ಪ್ರಾರ್ಥಿಸುವುದಿಲ್ಲ ಎಂಬುವಂತಹ ವಿಚಾರಗಳನ್ನು ನಾವು ಇಲ್ಲಿ ಕಾಣಬಹುದು.
©2024 Book Brahma Private Limited.