ಉರಿಯ ಪದವು-ನಾಮದೇವ್ ಢಸಾಳ್ ಕವಿತೆಗಳು

Author : ಎಚ್.ಎಸ್. ಅನುಪಮಾ

Pages 134

₹ 150.00




Year of Publication: 2012
Published by: ಲಡಾಯಿ ಪ್ರಕಾಶನ
Address: #21, ಪ್ರಸಾದ್ ಹೋಟೆಲ್, ಗದಗ- 582101
Phone: 9480286844

Synopsys

‘ಉರಿಯ ಪದವು’ ನಾಮದೇವ್ ಢಸಾಳ್ ಕವಿತೆಗಳನ್ನು ಡಾ.ಎಚ್.ಎಸ್. ಅನುಪಮಾ ಕನ್ನಡೀಕರಿಸಿದ್ದಾರೆ. ಈ ಕೃತಿಗೆ ಹಿರಿಯ ಸಾಹಿತಿ ಎಸ್.ಜಿ.ಸಿದ್ಧರಾಮಯ್ಯ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಶೋಷಿತ ಸಮುದಾಯಗಳ ನಗ್ನ ಮೈಗಳ ಬೆಂಕಿ ಕತೆ ಪುರಾಣಗಳು ಧಾರ್ಮಿಕ ಆಚರಣೆಗಳಾಗಿ ನಂಬಿಕೆಗಳಾಗಿ ಅರಿವನ್ನು ಕೊಂದು ಶೋಷಣೆಗೊಳಗಾದ ಜನರ ಬದುಕನ್ನು ತುಂಬಿಕೊಂಡಿವೆ. ಜೀತಪದ್ಧತಿ ಹೋದರೂ ಮಾನಸಿಕ ಜೀತಗಾರಿಕೆಯನ್ನು ಉಳಿಸುವ ಹುನ್ನಾರದ ಆಚರಣೆಗಳಿವು. ಹೀಗೆ ಹಸಿವು, ಅವಮಾನಗಳ ನೋವುಣ್ಣುವ ಜನರ ಪರಿ ಹಾಗೂ ಪರರ ನೋವನ್ನೇ ತಮ್ಮ ಆಹಾರವಾಗಿಸಿಕೊಂಡ ಜನರು ಉಣ್ಣುವ ಪರಿ ಈ ಎರಡೂ ಶ್ರೇಣೀಕೃತ ವ್ಯವಸ್ಥೆಯ ಕ್ರೌರ್ಯಕ್ಕೆ ಒಡ್ಡಿದ ಕನ್ನಡಿ ರೂಪದ ಪ್ರತಿಮೆಗಳಾಗಿವೆ. ಉಣ್ಣುವ ಕ್ರಿಯೆಯಲ್ಲಿ ಹಸಿವು ಮತ್ತು ಭುಂಜನೆ ಎರಡೂ ಕ್ರಿಯಾರೂಪಗಳು. ವಿರುದ್ಧ ಜಗತ್ತಿನ ಸಂವೇದನೆಗಳ ಸಾಕ್ಷೀರೂಪಗಳು. ಹಸಿವು ಸ್ಥಿತಿಯನ್ನು ಹೇಳಿದರೆ ಭುಂಜನೆ ಸ್ಥಿತಿಯ ಪರಿಣಾಮವನ್ನು ಹೇಳುತ್ತಿದೆ. ಒಬ್ಬನದು ಸ್ಥಿತಿ, ಮತ್ತೊಬ್ಬನದು ಪರಿಣಾಮ, ಒಬ್ಬನದು ಶ್ರಮ, ಮತ್ತೊಬ್ಬನದು ಫಲ. ಹಸಿವನ್ನೇ ಉಣ್ಣುವ ಶೋಷಿತ, ಹಸಿದವನ ನೋವನ್ನೇ ಉಣ್ಣುವ ಶೋಷಕ ಈ ಎರಡೂ ಉಣ್ಣುವ ಕ್ರಿಯೆಯನ್ನು ಹೇಳುತ್ತಲೇ ಅವುಗಳ ಹಿಂದಿರುವ ರಾಜಕೀಯ, ಸಾಮಾಜಿಕ ಮನೋವ್ಯಾಪಾರವನ್ನು ತಣ್ಣನೆಯ ಮಾತುಗಳಲ್ಲಿ ಈ ಕವಿತೆ ಕಟ್ಟಿಕೊಡುತ್ತಿದೆ. ಕವಿಗೆ ತಾನು ಬಳಸುವ ಭಾಷೆ ಗುಪ್ತಾಂಗದ ಹುಣ್ಣಿನಂತೆ ಅನುಭವಕ್ಕೆ ಬಂದಿದೆ. ಹೇಳಿಕೊಳ್ಳಲಾಗದ, ತಾಳಿಕೊಳ್ಳಲಾಗದ ಉರಿನಾಲಿಗೆಯಾಗಿದೆ. ಢಸಾಳರ ಇಡೀ ಕಾವ್ಯದ ಭಾಷೆ ಉರಿನಾಲಿಗೆಯ ಭಾಷೆಯಾಗಿದೆ ಎಂದಿದ್ದಾರೆ ಎಸ್.ಜಿ. ಸಿದ್ಧರಾಮಯ್ಯ.

About the Author

ಎಚ್.ಎಸ್. ಅನುಪಮಾ

ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು  ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...

READ MORE

Reviews

(ಹೊಸತು, ಫೆಬ್ರವರಿ 2013, ಪುಸ್ತಕದ ಪರಿಚಯ)

“ಶೋಷಿತ ಜಗತ್ತಿನ ಬರಹಗಾರನಿಗೆ ಅಗತ್ಯವಾದುದು ಸಾಮಾಜಿಕ ಸಿದ್ಧಾಂತವೇ ಹೊರತು ಕಲಾತ್ಮಕ ಸಿದ್ಧಾಂತವಲ್ಲ” – ಎಂಬ ವೊಲೆ ಷೋಯಿಂಕಾನ ಮಾತು ಈ ಕವನ ಸಂಕಲನಕ್ಕೆ ಹೆಚ್ಚು ಒಪ್ಪುತ್ತದೆ. ಇದು ಶೋಷಿತ ಸಮಾಜದ ಅಷ್ಟದಶಗಳನ್ನು ಹಿಡಿದಿಟ್ಟಿದೆ. ನಾಮದೇವ ಢಸಾಳರು ತಮ್ಮ ಕವನಗಳಲ್ಲಿ ತೋರುವ ಸಿಟ್ಟು, ಆಕ್ರೋಶಗಳಿಗೆ ವಂಚಿತ ಸಮುದಾಯವನ್ನು ಎಚ್ಚರಿಸುವ, ಅನ್ಯಾಯಗಳನ್ನು ಖಂಡಿಸುವ ಉದ್ದೇಶವಿದೆ. ಈ ಕಾವ್ಯವನ್ನು ಸುಮ್ಮನೆ ಓದಿಕೊಂಡು ಇದ್ದುಬಿಡಲಾಗದೆ ಸಮಾಜದ ಕುರಿತು ತೀವ್ರತರವಾದ ಚಿಂತನೆಗೆ ದೂಡುತ್ತದೆ. ನಮ್ಮೊಳಗಿನ ಮನುಷ್ಯನನ್ನು ಎಚ್ಚರಿಸುತ್ತದೆ. ನಾಮದೇವ ಢಸಾಳರ ಭಾಷಾ ಲೋಕ ಹಾಗೂ ಜನಪದ ಸಂಪೂರ್ಣ ಭಿನ್ನ. ಲೇವಡಿ, ವ್ಯಂಗ್ಯ, ಸಿಟ್ಟಿನ ಅಭಿವ್ಯಕ್ತಿಗೆ ಬಳಸುವ ಗ್ರಾಮ್ಯ (ಕಚ್ಚಾ) ಭಾಷೆ ಸಾಂಪ್ರದಾಯಿಕ ಭಾಷೆಯ ಎಲ್ಲಾ ನಿರ್ಬಂಧಗಳನ್ನು ಛಿದ್ರಗೊಳಿಸಿ ಕಾವ್ಯಕ್ಕೆ ಗಡುಸುತನವನ್ನು ಘಾತಿಸಿ ಹೇಳುವ ಶೈಲಿ ಇವರದ್ದಾಗಿದೆ. ಇದು ಅಗತ್ಯವೂ ಕೂಡ. ವಂಚನೆಗೆ ಒಳಗಾದ ಸಮುದಾಯದ ಜಾಗೃತ ಮನಸ್ಸುಗಳು ತಮ್ಮ ಸಿಟ್ಟು, ಆಕ್ರೋಶ, ನೋವು, ಹಿಂಸೆ ಹಾಗೂ ಬೇಗುದಿಯನ್ನು ಸಹಜವಾಗಿ ಹೊರಗೆಡವಲು ನೈಜತೆಯಿಂದ ಕೂಡಿರಲು ಗ್ರಾಮ್ಯ ಭಾಷೆಯೇ ಹೆಚ್ಚು ಸೂಕ್ತ. ಒಟ್ಟಾರೆ ಎಲ್ಲಾ ಸಾಮಾಜಿಕ, ರಾಜಕೀಯ, ಧಾರ್ಮಿಕ ಮೌಲ್ಯದ ಕಟ್ಟುಪಾಡುಗಳನ್ನು ಮುಟ್ಟುಮೈಲಿಗೆಗಳನ್ನು ಝಂಕಿಸಿ ಮಾತನಾಡುವ ಇಲ್ಲಿನ ಕವನಗಳು ವಚನಕಾರ ಅಲ್ಲಮನ ಶೈಲಿಯನ್ನು ನೆನಪಿಸುತ್ತವೆ. ತಿವಿಯುವ ಬಾಣದಂತೆ ತೂರಿಬರುತ್ತವೆ. ಅನುಪಮಾ ಅವರ ಅನುವಾದ ನಾಮದೇವ ಢಸಾಳರನ್ನು ಹಾಗೂ ಅವರ ಕವಿತೆಗಳನ್ನು ಕನ್ನಡವಾಗಿಸಿದೆ. ಈ ಅನುವಾದಕರು ಕನ್ನಡದ ಸಹಜ ಪದಗತಿಯ ನೆಲಮಾತು, ಕನ್ನಡ ಭಾಷೆಯ ಬಣ್ಣ, ಲಯ, ವಾಸನೆಯನ್ನು ಹಿಡಿದಿಡುವಲ್ಲಿ ಯಶ ಕಂಡಿದ್ದಾರೆ.

Related Books