ಮಲಯಾಳಂನ ಶ್ರೇಷ್ಠ ಕಥೆಗಳು-ವಿವಿಧ ಲೇಖಕರು ಮಲಯಾಳಂ ಭಾಷೆಯಲ್ಲಿ ಬರೆದ ಉತ್ತಮ ಆಯ್ದ ಕಥೆಗಳನ್ನು ಲೇಖಕ ಕೆ.ಕೆ. ಗಂಗಾಧರನ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಥಾ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿಯಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.
(ಹೊಸತು, ಡಿಸೆಂಬರ್ 2014, ಪುಸ್ತಕದ ಪರಿಚಯ)
ಇವು ಮಲಯಾಳಂನಿಂದ ಅನುವಾದಗೊಂಡ ಬದುಕಿನ ಬಣ್ಣಗಳನ್ನು ತೆರೆದಿಡುವ ಕಥೆಗಳು. ಎಲ್ಲ ಬಣ್ಣಗಳೂ ಸೇರಿ ಬಿಳಿಯ ಬಣ್ಣವಾಗುವಂತೆ, ದೇಶಪ್ರದೇಶಗಳು ವಿವಿಧ ಭಾಷೆಯವಾಗಿದ್ದರೂ ಅವು ಮಿಡಿಯುವ ಭಾವನೆಗಳು ಒಂದೇ ಎಂಬ ನೀತಿ ಈ ಕಥೆಗಳಲ್ಲಿದೆ. ಎಲ್ಲೋ ನಡೆದ ಕೋಮು ವಿದ್ವೇಷದ ಕ್ರೌರ್ಯ ಇನ್ನೆಲ್ಲೋ ಇರುವ ಸಹೃದಯನನ್ನು ಕಲಕುವುದು ಹೀಗೆ. ಬದುಕಿನ ಏರಿಳಿತ ಕ್ಷಣಕ್ಷಣಕ್ಕೆ ಬದಲಾದಾಗ ತನ್ನ ಗುರುತು ತನಗೇ ಸಿಗದಷ್ಟು ಬದಲಾಗಿ ಅಪರಿಚಿತನಾಗುವುದೂ ಹೀಗೆಯೇ. ಮನುಷ್ಯ ಕೆಲವೊಮ್ಮೆ ಅತಿ ಸ್ವಾರ್ಥಿ ಕೆಲವೊಮ್ಮೆ ಅಗತ್ಯಕ್ಕಿಂತಲೂ ಉದಾರಿ, ಅತಿರೇಕಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾದಾಗ ನಾವು ವ್ಯಕ್ತಿತ್ವ ಕಳೆದುಕೊಂಡುಬಿಡುತ್ತೇವೆ. ಇಂಥ ಕಥಾಪಾತ್ರಗಳು ಇಲ್ಲಿ ಕಾಣಿಸಿಕೊಂಡು ನಗಣ್ಯವೆನಿಸಿವೆ. ಉದಾತ್ತ ದೃಷ್ಟಿಕೋನದ ಪಾತ್ರಗಳೂ ಇವೆ. ಅವು ಮಿಂಚಿ ನಾವೇನೂ ನಶಿಸಿಲ್ಲ ಎಂದು ಬೀಗಿ ಎದ್ದುನಿಲ್ಲುತ್ತವೆ. ಮಲೆಯಾಳಂನ ಉತ್ತಮ ಬರಹಗಾರರು ಹಲವು ಬಗೆಗಳಲ್ಲಿ ಚಿಂತಿಸಿ ಸಮಾಜದ ಕೆಳವರ್ಗಗಳನ್ನು ಪ್ರತಿನಿಧಿಸಿದ್ದಾರೆ. ಮನಕರಗುವ ಹಲವು ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಇವು ಸ್ವಲ್ಪ ಕಾಲದ ಹಿಂದೆ ಬರೆದ ಕಥೆಗಳಾದರೂ ಸಾರ್ವಕಾಲಿಕ ನೀತಿಯೊಂದನ್ನು ಪ್ರತಿಪಾದಿಸುತ್ತವೆ. ಜನಮನದಲ್ಲಿ ಚಿರಕಾಲ ನಿಲ್ಲುವ ಈ ಕಥೆಗಳನ್ನು ಶ್ರೀ ಕೆ. ಕೆ. ಗಂಗಾಧರನ್ ಸುಲಲಿತವಾಗಿ ಅನುವಾದಿಸಿದ್ದಾರೆ.
©2024 Book Brahma Private Limited.