ಪ್ರೊ. ಬಿ. ಗಂಗಾಧರಮೂರ್ತಿ ಅವರು ಹೊರತಂದಿರುವ ’ಸೂಫಿ ಕಥಾಲೋಕ’ ಒಂದು ನೂರು ಸೂಫಿ ಕತೆಗಳ ಅಪೂರ್ವ ಸಂಕಲನವಾಗಿದೆ.
ಕನ್ನಡದ ಮಟ್ಟಿಗೆ ಬಂದಿರುವ ಸೂಫಿ ಕತೆಗಳ ಅನುವಾದಗಳಲ್ಲೇ ಇದು ವಿಶೇಷವಾದ ಕೃತಿ, ಈ ಕತೆಗಳು ಅನುವಾದ ಎನ್ನುವುದಕ್ಕಿಂತ ನಮ್ಮ ನಡುವೆಯೇ ಹುಟ್ಟಿಬಂದವುಗಳೇನೋ ಎನ್ನುವಂತೆ ಇವೆ. ಲೇಖಕರು ಎಲ್ಲೂ ತಡೆಯಿರದಂತೆ ಓದುವ ರೀತಿಯಲ್ಲಿ ಅವುಗಳ ಬಹುಸ್ತರೀಯತೆಯ ಸೂಕ್ಷ್ಮವು ಹಾಳಾಗದಂತೆ ಸಹಜವಾಗಿ ಅನುವಾದಿಸಿದ್ದಾರೆ.ಇವರ ಭಾವಾನುವಾದದಲ್ಲಿ ಸೂಫಿಗಳು ವಿದೇಶಿ ಪ್ರವಾಸಿಗಳಂತೆ ಕಾಣಿಸದೆ ಬೆಡಗಿನ ವಚನಗಳ ಅನುಭಾವಿಗಳಂತೆ ಕಾಣಿಸುತ್ತಾರೆ.
ಲೇಖಕರ ಸಾಹಿತ್ಯದ ಪ್ರೇಮ, ಜೊತೆಗೇ ಅವರಲ್ಲಿ ಸದಾ ಜಾಗೃತವಾಗಿರುವ ರಾಜಕೀಯ ಸಾಂಸ್ಕೃತಿಕ ಒತ್ತಾಸೆಗಳು ಈ ಕಥೆಗಳನ್ನು ಹಿಡಿದಿಟ್ಟಿವೆ. ಜೊತೆಗೇ ಅವರು ಪ್ರೀತಿಸುವ ಓದುಗರು ಹೇಳುವಂತೆಯೂ ಮಾಡಿವೆ. ಬೈಬಲ್, ಕುರಾನ್ , ಭಗವದ್ಗೀತೆ, ಪರಮಹಂಸರ ಕಥಾಮೃತ-ಈ ಎಲ್ಲವೂ, ಹುಬ್ಬುಗಟ್ಟಿದ ಮತನಿಷ್ಠೆಯ ಅಗತ್ಯವೇ ಇಲ್ಲದಂತೆ, ಈ ಸೂಫಿಕತೆಗಳಲ್ಲಿ ಸುಮ್ಮನೇ ಒದಗಿಬಿಡುವ ಸರಳತೆಯನ್ನು ಮನಸ್ಸಿನಲ್ಲಿ ತುಂಬಿಕೊಳ್ಳುವಂತೆ ಮಾಡುತ್ತದೆ.
ಸಮಾಜದ ಎಲ್ಲಾ ವಿದ್ಯಮಾನಗಳನ್ನು ಹಳದಿ ಕಣ್ಣಿಂದ ನೋಡಿ, ತೋರಿಸಿ ಅದರ ಬಹುತ್ವ ಮತ್ತು ಸೆಕ್ಯುಲರ್ ಮೂಲಸತ್ವವನ್ನು ನಾಶಮಾಡುವ ಪ್ರವೃತ್ತಿ ಬಲವಾಗುತ್ತಿದೆ. ಸೂಫಿ ಕತೆಗಳ ಅದ್ಭುತ ಲೋಕವನ್ನು ಪರಿಚಯಿಸುವ, ನೆನಪಿಸುವ ಮೂಲಕ ಈ ಮೂಲಸತ್ವವನ್ನು ಉಳಿಸುವ ಪ್ರಯತ್ನಕ್ಕೆ ಕೈಜೋಡಿಸಿದಂತಾಗಿದೆ. ಈ ಪುಸ್ತಕದ ಪ್ರಕಟಣೆ ಅತ್ಯಂತ ಪ್ರಸ್ತುತವಾಗಿದೆ.
ಪುಸ್ತಕ ಪರಿಚಯ: ಹೊಸತು-2009 ಜೂನ್
ಸ್ವಾರಸ್ಯಕರ ಕಥೆಗಳಿಂದ ಸೂಫಿ ಕಥಾಲೋಕ ವಿಜೃಂಭಿಸಿದೆ. ಓದಿ ತಿಳಿದುಕೊಳ್ಳದಿದ್ದಲ್ಲಿ ಅಮೂಲ್ಯ ಜ್ಞಾನನಿಧಿಯೊಂದನ್ನು ಕಳೆದುಕೊಂಡ ಹಾಗೆಯೇ ! ಚತುರ ಸಂಭಾಷಣೆ ಮೂಲಕ ಹೊರಹೊಮ್ಮುವ ಮಾತುಗಳಿಂದ, ನಾವು ಗುರುತಿಸದ ಎಷ್ಟೋ ಸಂಗತಿಗಳು ಅರಿವಾಗಿ ಮುಂದೆ ನಮಗೆ ಬೆಂಗಾವಲಾಗಿರುತ್ತವೆ. ಎಲ್ಲೆಲ್ಲೂ ರಾಜಮಾರ್ಗ ಇರುವುದಿಲ್ಲ. ದಾರಿಮಧ್ಯೆ ಇರುವ ಕಲ್ಲನ್ನೆಡವಿ ಶಪಿಸುತ್ತ ನೋವು ತಿನ್ನುವ ಬದಲಿಗೆ ಕಲ್ಲನ್ನು ಬಳಸಿಕೊಂಡು ನಡೆಯುವುದು ವಿವೇಕ. ಇಂತಹ ಸಂದೇಶಗಳನ್ನು ಸ್ವತಃ ಮೈಗೂಡಿಸಿಕೊಂಡು ಲೋಕಜ್ಞಾನವನ್ನು ತಿಳಿಹೇಳುತ್ತ ದೇಶಸಂಚಾರ ಮಾಡುತ್ತಿದ್ದ ಸೂಫಿ ಸಂತರು, ಕಥೆಗಳ ಮೂಲಕ ನಮಗೂ ದಾರ್ಶನಿಕರೆನಿಸುತ್ತಾರೆ. ಕಥೆಗಳಲ್ಲಿ ಬರುವ ಪ್ರಕೃತಿಯ ಪ್ರತಿಯೊಂದು ವಸ್ತುವೂ ಮನುಷ್ಯನಿಗೆ ಪಾಠ ಕಲಿಸುತ್ತದೆ.
©2024 Book Brahma Private Limited.