ವೈಕಂ ಮುಹಮ್ಮದ್ ಬಷೀರ್ ಕತೆಗಳ ಅನುವಾದ ಕೃತಿ ಮೋಹನ್ ಕುಂಟಾರ್ ಅವರ ‘ಪ್ರೇಮಪತ್ರ’. ಈ ಕೃತಿಗೆ ಓ.ಎಲ್ ನಾಗಭೂಷಣ ಸ್ವಾಮಿ ಅವರು ಮುನ್ನುಡಿ ಬರೆದಿದ್ದು, ‘ಬೈಕಂ ಮುಹಮ್ಮದ್ ಬಷೀರ್ ಅವರ ಇಪ್ಪತ್ತಮೂರು ಕಥೆಗಳನ್ನು ಗೆಳೆಯ ಮೋಹನ ಕುಂಬಾರ್ ಅವರು ಕನ್ನಡಿಸಿದ್ದಾರೆ. ಅನುವಾದವೆನ್ನುವುದು ಎರಡು ನುಡಿಗಳ ನಡುವೆ ಸೇತುವೆ ಕಟ್ಟುವ ಕೆಲಸ. ಕನ್ನಡ-ಮಲಯಾಳಂ ನುಡಿಗಳ ಪ್ರದರ್ಶಕ ಕಲೆ ಮತ್ತು ಸಾಹಿತ್ಯಗಳ ನಡುವೆ ಸಂವಾದ ಏರ್ಪಡಿಸುವ ಅವರ ಉತ್ಸಾಹಕ್ಕೆ ಸುಮಾರು ಇಪ್ಪತ್ತೈದು ವರ್ಷಗಳ ಚರಿತ್ರೆ ಇದೆ. ಕನ್ನಡ ಮಲಯಾಳಂ ನುಡಿಗಳ ನಡುವೆ ಇದುವರೆಗೆ ನಡೆದಿರುವ ಕೊಳುಕೊಡೆಗಳ ಸ್ವರೂಪದ ಸ್ಪಷ್ಟವಾದ ಅರಿವೂ ಕುಂಟಾರ್ ಬರಹದಲ್ಲಿ ವ್ಯಕ್ತವಾಗುತ್ತದೆ. ಮೋಹನ ಕುಂಟಾರ್ ಇದೀಗ ಎರಡನೆಯ ಬಾಲಗೆ ಬಷೀರ್ ಅವರ ಕಥೆಗಳ ಅನುವಾದ ಸಂಕಲನವನ್ನು ರೂಪಿಸಿದ್ದಾರೆ. ಅನುವಾದವು ಕನ್ನಡಕ್ಕೆ ಹೊಂದಿಕೊಳ್ಳಬೇಕು ಅನ್ನುವುದಕ್ಕಿಂತ ಮಲಯಾಳಂ ಕಥೆಯನ್ನು ಆದಷ್ಟೂ ಮಟ್ಟಗೆ ಅದು ಇರುವ ಹಾಗೇ ತೋರುವ ನುಡಿಕನ್ನಡಿ ಆಗಬೇಕು ಅನ್ನುವುದು ಮೋಹನ ಕುಂಟಾರ್ ಅವರ ಈ ಸಂಕಲನದ ಉದ್ದೇಶ, ಇದರಿಂದ ಬಷೀರ್ ಅವರ ನುಡಿ ಬಳಕೆ, ವ್ಯಂಗ್ಯ, ವಿನೋದ ಧೋರಣೆ ಇವು ಮಲಯಾಳಂನಲ್ಲಿ ಹೇಗೆ ವ್ಯಕ್ತವಾಗಿದೆ ಅನ್ನುವುದನ್ನು ಕನ್ನಡ ಓದುಗರು ಊಹಿಸಿಕೊಳ್ಳಲು ಅನುಕೂಲವಾಗಿದೆ. ವಿನೋದದ ದಾಟಿ ಮುಖ್ಯವಾಗಿರುವ, ಪ್ರೀತಿಯ ವಸ್ತುವನ್ನು ಒಳಗೊಂಡಿರುವ ಕಲೆಗಳನ್ನು ಆಯ್ದುಕೊಂಡಿರುವುದರಿಂದ ಮಲಯಾಳಂಗೆ ಸಹಜವೆನಿಸುವ, ಇಂದಿನ ಕನ್ನಡದ ಕಥೆಗಳ ಭಾಷೆಗೆ ಹೊಂದದ ಸಂಸ್ಕೃತ ಪದಗಳ ಬಳಕೆ ವೈನೋದಿಕಕ್ಕೆ ಬಹಳ ಚೆನ್ನಾಗಿ ಹೊಂದಿಕೊಳ್ಳುವಂತಾಗಿದೆ. ಕುಂಟಾರ್ ಅವರ ಪ್ರಾಮಾಣಿಕವಾದ ಆಸಕ್ತಿ, ಶ್ರಮಗಳ ಫಲವಾಗಿ ಮೂಡಿರುವ ಈ ಸಂಕಲನ ಅವರ ಇದುವರೆಗಿನ ಹನ್ನೊಂದು ಅನುವಾದ ಕೃತಿಗಳಲ್ಲಿ ಮುಖ್ಯವಾದ ಸ್ಥಾನವನ್ನು ಪಡೆದಿದೆ. 71ನ ಸಂವೇದನೆಯನ್ನು ಬೆಳೆಸುವ ಇಂಥ ಅನುವಾದವನ್ನು ರೂಪಿಸಿದ ಮೋಹನ ಕುಂಟಾರ್ ಅವರಿಗೆ ಅಭಿನಂದನೆಗಳು’ ಎಂದಿದ್ದಾರೆ.
‘ಪ್ರೇಮಪತ್ರ ’ ಕೃತಿಯ ವಿಮರ್ಶೆ
ಕಾಡುವ ಪಾತ್ರಗಳ 'ಪ್ರೇಮಪತ್ರ'
ವೈ. ಕಂ ಮುಹಮ್ಮದ್ ಬಷೀರ್ ಅವರ ಇಪ್ಪತ್ತಮೂರು ಮಲಯಾಳಂ ಕಥೆಗಳ ಅನುವಾದ ಕತೆಗಳ ಅನುವಾದ ಕೃತಿ ‘ಪ್ರೇಮಪತ್ರ’. ಈ ಮೂಲಕ ಮೋಹನ್ ಕುಂಟಾರ್ ಎರಡನೇ ಬಾರಿಗೆ ಬಷೀರ್ ಅವರ ಕಥೆಗಳ ಅನುವಾದ ಸಂಕಲನವನ್ನು ಕನ್ನಡಕ್ಕೆ ತಂದಿದ್ದಾರೆ. ಕರ್ನಾಟಕ ಕೇರಳ ಗಡಿಯಾದ ಕಾಸರಗೋಡಿನ ಮೋಹನ ಅವರು, ಕನ್ನಡಿಗರಿಗೆ ಮಲಯಾಳಂ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಪರಿಚಯಿಸುತ್ತಾ ಬಂದಿದ್ದಾರೆ. ಈ ಹಿಂದೆ 1999ರಲ್ಲಿ 'ಬಶೀರ್ ಕತೆಗಳು' ಎಂಬ ಶೀರ್ಷಿಕೆಯಲ್ಲಿ ಮೋಹನ ಅವರು ಬಷೀರ್ ಅವರ ಹತ್ತು ಕಥೆಗಳನ್ನು ಅನುವಾದ ಮಾಡಿದ್ದರು. ಇದೀಗ ಈ ಅನುವಾದಗಳನ್ನು ಪರಿಷ್ಕರಿಸಿ, ಹೊಸದಾಗಿ 13 ಕಥೆಗಳನ್ನು ಅನುವಾದಿಸಿ 'ಪ್ರೇಮಪತ್ರ' ಎಂಬ ಹೊಸ ಸಂಕಲನಕ್ಕೆ ಸೇರಿಸಿದ್ದಾರೆ.
ಇಲ್ಲಿ ಬದುಕಿನ ಹೋರಾಟ ಕಟ್ಟಿಕೊಡುವ ಕಥೆಗಳಿವೆ. ಹೀಗೆನ್ನುವುದಕ್ಕಿಂತ ಕಥೆ ಇರುವುದೇ ಜನ ಸಾಮಾನ್ಯರದ್ದು ಎನ್ನಬಹುದು. ಪ್ರೀತಿ, ಪ್ರೇಮಕ್ಕೆ ಹಲವು ಆಯಾಮಗಳು ಹಲವು ಕಥೆಗಳಲ್ಲಿ ಕಾಣಸಿಗುತ್ತವೆ. ಕೆಲವೆಡೆ ಮೊನಚಾದ ವಿನೋದದ ಧಾಟಿಯೂ ಇದೆ. ತಮ್ಮದೇ ನೋವು ನಲಿವುಗಳಿಗೂ ಅಕ್ಷರರೂಪ ನೀಡಿ ತಮ್ಮ ಬದುಕನ್ನೂ ಬಷೀರ್ ಇಲ್ಲಿ ದಾಖಲಿಸಿದ್ದಾರೆ. ಮೂಲಲೇಖಕರ ಭಾಷೆ, ಶೈಲಿಯನ್ನು ಉಳಿಸಿಕೊಳ್ಳುವ ಮೂಲಕ ಆ ಕಥೆಗಳಲ್ಲಿ ಹೆಚ್ಚಾಗಿರುವ ಸಂಸ್ಕೃತ, ಆಂಗ್ಲಮಿಶ್ರಿತ ಮಲಯಾಳಂ ಹಾಗೂ ವಿಶಿಷ್ಟ ಅರ್ಥ ಹೊಂದಿರುವ ಪದಗಳ ಸೊಗಡನ್ನು ಮೋಹನ್ ಅವರು ಉಳಿಸಿಕೊಂಡಿದ್ದಾರೆ.
(ಕೃಪೆ ; ಪ್ರಜಾವಾಣಿ, ಬರಹ)
©2024 Book Brahma Private Limited.