’ಮಾಧವಿಕುಟ್ಟಿ’ ಎಂಬ ಕಾವ್ಯನಾಮದಿಂದ ಕತೆಗಳನ್ನು ಬರೆಯುತ್ತಿದ್ದ ಕಮಲಾ ದಾಸ್ ಅವರದ್ದು ಮಲಯಾಳಂ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖ ಹೆಸರು. ಪ್ರಸ್ತುತ ಕೃತಿಯಲ್ಲಿ ಕಮಲಾ ದಾಸ್ ಅವರ ಮಲಯಾಳಂ ಕತೆಗಳನ್ನು ಕೆ.ಕೆ ಗಂಗಾಧರ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಮಲೆಯಾಳಂ ಸಾಹಿತ್ಯ ಜಗತ್ತಿನಲ್ಲಿ ಕಿರುಗತೆಯ ಕ್ಷೇತ್ರ ಬಹಳ ವಿಶಾಲವಾದುದು. ಕಾಲ್ಪನಿಕತೆ, ಅತಿಭಾವುಕತೆಯತ್ತ ಕಿರುಗತೆಗಳು ಜಾರುತ್ತಿರುವಾಗ ಕಮಲಾ ದಾಸ್ ಹೊಸ ಕತೆಗಳಿಗೆ ರೂಪ ನೀಡಿದರು. ವಿವಾದಗಳ ಅಗ್ನಿಕುಂಡಗಳನ್ನು ದಾಟಿ ತನ್ನ ಗುರಿಯನ್ನು ತಲುಪಲು ಕಮಲಾ ದಾಸ್ ಸಾಕಷ್ಟು ಮುಳ್ಳುಹಾದಿಗಳನ್ನು ತುಳಿಯಬೇಕಾಯಿತು. ಕಮಲಾ ದಾಸ್ರವರು ಸೋದರ ಮಾವ, ತಂದೆ, ತಾಯಿಯವರು ಹೇಳಿದ ದಟ್ಟ ಜೀವನಾನುಭವಗಳ ಹಿನ್ನೆಲೆಯಲ್ಲಿ ಅವರು ಕೃತಿಗಳನ್ನು ರಚಿಸಿದರು. ಮನುಷ್ಯನ ಒಳಮನಸ್ಸನ್ನು ಬಿಚ್ಚಿಡುವ ಶ್ರಮ ಅವರ ಕೃತಿಗಳಲ್ಲಿ ಕಾಣಸಿಗುತ್ತದೆ. ಇಲ್ಲಿನ ಪ್ರತಿಯೊಂದು ರಚನೆಗಳಲ್ಲೂ ಪ್ರಣಯ, ಪ್ರೀತಿ, ಕಾಮ, ಮನುಷ್ಯ ಸಂಬಂಧಗಳ ನಡುವಿನ ಸಂಕಟಗಳಿವೆ. ಕೇರಳದ ಗ್ರಾಮೀಣ ಬದುಕಿನ ಮುಗ್ಧತೆ, ಸ್ವಚ್ಛಂದತೆಗಳನ್ನು ಅವರು ತಮ್ಮ ಕತೆಗಳಲ್ಲಿ ಹಿಡಿದಿಟ್ಟಿದ್ದಾರೆ. ಅಂತೆಯೇ ನಗರದ ಸಂಘರ್ಷಯುಕ್ತ ಆತಂಕಕಾರಿ ಬದುಕನ್ನೂ, ಮನುಷ್ಯ ಮನಸ್ಸಿನ ಸಂಕೀರ್ಣತೆಗಳನ್ನೂ ಇಲ್ಲಿನ ಕತೆಗಳು ತೆರೆದಿಡುತ್ತವೆ.
©2024 Book Brahma Private Limited.