‘ಜಪಾನಿನ ಕಾಲ್ಪನಿಕ ಕಥೆಗಳು’ -ಯೈ ಥಿಯೋಡೋರಾ ಓಜಾಕಿ ಅವರ ಕತೆಗಳ ಕನ್ನಡಾನುವಾದ. ವಿಜಯ್ ನಾಗ್ ಜಿ ಅವರು ಜಪಾನಿನ ಪ್ರಸಿದ್ಧ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯಲ್ಲಿ ಇಪ್ಪತ್ತೆರಡು ಕತೆಗಳಿದ್ದು, ಅಷ್ಟೂ ಕತೆಗಳನ್ನು ಬಲು ಪ್ರೀತಿ ಮತ್ತು ಆಸ್ತೆಯಿಂದ ಅನುವಾದಿಸಿದ್ದಾರೆ.
ಒಂದರ್ಥದಲ್ಲಿ ಜೆನ್ ತತ್ವಜ್ಞಾನವನ್ನು,ಗುರುಗಳ ಜೀವನವನ್ನು ಚಿತ್ರಿಸುವ ಮೂಲಕ ಲೇಖಕರು ಈಗಾಗಲೇ ಆ ವಲಯವನ್ನು ಪ್ರವೇಶಿಸಿದ್ದಾರೆ. ಹಾಗಾಗಿ, ಜಪಾನಿನ ಕತೆಗಳನ್ನು ಅನುವಾದ ಮಾಡುವ ಕಾಲಕ್ಕೆ ಆ ಅನುಭವ ಇವರ ಪ್ರಜ್ಞೆಯಲ್ಲಿ ಅಗೋಚರವಾಗಿ ಕೆಲಸ ಮಾಡಿರುವುದು ವೇದ್ಯವಾಗುತ್ತದೆ. ಮೂಲ ಕತೆಗಳ ಕರ್ತೃ ಯೈ ಥಿಯೋಡೋರಾ ಓಜಾಕಿ ಅವರು. ಆಕೆಯ ತಂದೆ ಜಪಾನಿಯರು, ತಾಯಿ ಇಂಗ್ಲೆಂಡಿನವರು. ಲೇಖಕಿಯ ಪರಿಚಯದಲ್ಲಿ ನಾಗ್ ಅವರು ತಿಳಿಸಿರುವಂತೆ-ಆಕೆಯ ತಂದೆ ಸಬುರು ಓಜಾಕಿ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಹಾಗಾಗಿ ಥಿಯೋಡೋರಾ ಆರಂಭದಲ್ಲಿ ಇಂಗ್ಲೆಂಡಿನಲ್ಲಿ ಬೆಳೆದು ತರುವಾಯ ತಮ್ಮ ಹದಿನಾರನೆಯ ವಯಸ್ಸಿನಿಂದ ಜಪಾನಿನಲ್ಲಿ ಬೆಳೆಯುತ್ತಾರೆ. ಹಳೆಯ ಜಪಾನಿನ ವೀರಗಾಥೆಗಳನ್ನು ಇಷ್ಟಪಟ್ಟು ಅವುಗಳನ್ನು ಬರವಣಿಗೆಗೆ ಇಳಿಸಲು ಥಿಯೋಡೋರಾ ಮುಂದಾದರು. ಅದರ ಫಲವೇ ಈ ಸಂಕಲನದಲ್ಲಿರುವ ಇಪ್ಪತ್ತೆರಡು ಕತೆಗಳು.
ಈ ಕತೆಗಳು ಪ್ರಕಟವಾದದ್ದು 1903ನೆಯ ಇಸವಿಯಲ್ಲಿ. ಅಂದರೆ ಮಹಾಯುದ್ಧಗಳಿಗೂ ಮೊದಲು. ಅದೊಂದು ಪ್ರಪಂಚ. ಯುದ್ಧಗಳ ನಂತರ ಸಂಭವಿಸಿದ್ದು ಇನ್ನೊಂದು ಪ್ರಪಂಚ. ಆದಾಗ್ಯೂ ಮಾನವನ ಮೂಲ ಸ್ವಭಾವಗಳಲ್ಲಿ ಅಷ್ಟೇನೂ ಬದಲಾವಣೆಗಳು ಉಂಟಾಗಿಲ್ಲ. ಒಳ್ಳೆಯವರು ಯಾವುದೇ ಸಮಯದಲ್ಲಿ ತಮ್ಮ ಒಳ್ಳೆಯತನವನ್ನು ಕಡೆಯವರೆಗೂ ಕಾಪಾಡಿಕೊಳ್ಳುತ್ತಾರೆ; ಇವರ ಪ್ರಭಾವದಿಂದ ಕೆಟ್ಟವರೂ ಒಳ್ಳೆಯವರಾಗಿ ಪರಿವರ್ತಿತರಾಗುತ್ತಾರೆ. ಒಂದು ವೇಳೆ ಅವರು ದಾರಿಗೆ ಬಾರದೆ ತಮ್ಮ ಕೆಟ್ಟ ನಡವಳಿಕೆಯನ್ನೇ ಮುಂದುವರಿಸುವುದಾದರೆ, ಅದು ಅವರ ವಿಧಿ, ಅಷ್ಟೆ. ಆದರೆ ಬದಲಾಗುವವರ ಪ್ರಮಾಣವೇ ಹೆಚ್ಚು. ಉತ್ತಮರ ಸಂಪರ್ಕದಿಂದ ದುಷ್ಟರೂ ಸರಿದಾರಿಗೆ ಬರುತ್ತಾರೆ; ಇಂಥ ಸಾಧ್ಯತೆಯನ್ನು ಸಾಬೀತು ಪಡಿಸುವ ಹಲವು ಕತೆಗಳು ಈ ಸಂಕಲನದಲ್ಲಿವೆ.
ಜೊತೆಗೆ, ಈ ಕತೆಗಳ ವೈಶಿಷ್ಟ್ಯವೇನೆಂದರೆ ಇವು ಹೆಚ್ಚು ಕಡಿಮೆ “ ಫೇರಿ ಕತೆ”ಗಳೇ ಆಗಿವೆ. ಇಲ್ಲಿ ಮನುಷ್ಯರೊಡನೆ ಮೃಗ ಪಕ್ಷಿಗಳು ಮಾತನಾಡುತ್ತವೆ. ಮೃಗ ಪಕ್ಷಿಗಳಿಗೂ ಮಾನವರಿಗಿರುವಂತೆಯೇ ಒಳ್ಳೆಯದಾವುದು ಕೆಟ್ಟದಾವುದು ಎಂಬುದರ ಬಗ್ಗೆ ಅರಿವಿರುತ್ತದೆ. ಕೆಟ್ಟವರಿಗೆ ಒಳಿಗಾಲವಿಲ್ಲ ಒಳ್ಳೆಯವರು ಕೊನೆಗೆ ಗೆದ್ದೇ ಗೆಲ್ಲುತ್ತಾರೆಂಬ ತತ್ವ ಇಲ್ಲಿ ಅನೇಕ ಕತೆಗಳಲ್ಲಿ ಸಾಬೀತಾಗಿದೆ.
©2024 Book Brahma Private Limited.