ಚಿಲಿಯಲ್ಲಿ ಭೂಕಂಪ ಜರ್ಮನ್ ಕತೆಗಾರ ಹೀನ್ರಿಶ್ ಕೆಯಿಸ್ಟನ ಕತೆ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಬಂಧಗಳು, ಜಗತ್ತನ್ನು ಪೊರೆಯುವ ಪ್ರೀತಿಯನ್ನು ಧರ್ಮದ ಕ್ರೌರ್ಯ ತನ್ನ ಉಗುರುಗಳಿಂದ ಸೀಳುವ ಹೊತ್ತಿನಲ್ಲಿ ಅದಕ್ಕೆ ಪ್ರಬಲ ಪ್ರತಿರೋಧವೋ ಎಂಬಂತೆ ಸಂಭವಿಸುವ ಭೂಕಂಪ ಈ ಕತೆಯ ಪ್ರಧಾನ ರೂಪಕವಾಗಿದೆ. ಮನುಷ್ಯ ಸಂಬಂಧಗಳು ನೆಲಕಚ್ಚುವ ಸಂದರ್ಭವನ್ನು ಈ ಕತೆ ಹಿಡಿದಿಡುತ್ತದೆ. ಇಂತಹ ಹೃದಯಸ್ಪರ್ಶಿ ಹದಿನೆಂಟು ಕಥನಗಳನ್ನು ವಿವೇಕ ರೈ ಅವರು ಇಲ್ಲಿ ಸಂಗ್ರಹಿಸಿ ನೀಡಿದ್ದಾರೆ. ಹೆರ್ತಾ ಮುಲ್ಲರ್ಳ “ಬೀದಿ ಗುಡಿಸುವ ಜಾಡಮಾಲಿಗಳು' ಇಂತಹದೇ ವಿಷಾದವನ್ನು ಹೊದ್ದುಕೊಂಡ ಇನ್ನೊಂದು ಕತೆ. ವೈವಿಧ್ಯಮಯ ಕಥನದ ಮಾದರಿಗಳನ್ನು ಇಲ್ಲಿ ಲೇಖಕರು ಮುಖಾಮುಖಿಯಾಗಿಸಿದ್ದಾರೆ. ಈ ಕಾರಣದಿಂದಲೇ ಅವರು ತೆನಾಲಿರಾಮನ ಬದನೆ ಕದ್ದ ಕತೆ, ಗುಬ್ಬಚ್ಚಿ ಕತೆ, ಹಿಮಗೌರಿ ಮತ್ತು ಏಳು ಜನ ಕುಳ್ಳರಿಗೆ ಸಂಬಂಧಿಸಿದ ಕತೆಗಳನ್ನೂ ಸೇರಿಸಿದ್ದಾರೆ. ಇಲ್ಲಿರುವ ಕತೆಗಳು ದೇಶ, ಧರ್ಮ, ಭಾಷೆಯ ಗಡಿಗಳನ್ನು ಅಳಿಸಿ, ನಮ್ಮನ್ನು ಪರಸ್ಪರ ಬೆಸೆಯುವಂತೆ ಮಾಡುತ್ತದೆ.
©2024 Book Brahma Private Limited.