‘ಚೆಕ್ ಮೇಟ್’ ಇಂಗ್ಲಿಷ್ ಭಾಷೆಯ ಭಾರತೀಯ ಕತೆಗಾರ ರಾಮೇಂದ್ರ ಕುಮಾರ ಅವರ ಕೃತಿಯನ್ನು ಡಾ.ಅರವಿಂದ ಪಟೇಲ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಗೆ ವೀರೇಂದ್ರ ರಾವಿಹಾಳ್ ಅವರು ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ತಿಳಿಸುತ್ತಾ.. ‘ರಾಮೇಂದ್ರ ಕುಮಾರರ ಕಥೆಗಳು ಅಂದ್ರೆ ಹಾಗೇನೇ! ಸಹಜವಾದ ಓಘದೊಡನೆ ಕುತೂಹಲ ಮತ್ತು ಲವಲವಿಕೆಗಳನ್ನು ಮೈಗೂಡಿಸಿಕೊಂಡು ನಿರಾಯಾಸವಾಗಿ ಓದಿಸಿಕೊಂಡು ಹೋಗುವ ಗುಣವನ್ನು ಮೈದಾಳಿಕೊಂಡಿರುತ್ತವೆ. ಭಾಷೆಯ ಸರಳವಾಗಿದ್ದು ಎಳೆಯ ಮಕ್ಕಳ ಗ್ರಹಿಕೆಗೆ ಸುಲಭವಾಗಿ ದಕ್ಕುತ್ತದೆ. ಬಳಕೆಯೂ ಸಹ ರಾಮೇಂದ್ರ ಕುಮಾರರಿಗೆ ಮಕ್ಕಳ ಮನೋರಂಗದ ಬಗ್ಗೆ ಅದ್ಭುತವಾದ ಅರಿವಿದೆ. ಹಿಂದೆ ಇವರ ತಾವೋಲಿನ್ ಕಥೆಗಳನ್ನು ಓದಿದಾಗಲೂ ನನ್ನಲ್ಲಿ ಇದೇ ಭಾವ ಮೂಡಿತ್ತು.
ಇದೀಗ ಡಾ. ಅರವಿಂದ ಪಟೇಲ್ ಅವರ ಮೂಸೆಯಿಂದ ಮತ್ತೆ ಹತ್ತು ಕಥೆಗಳು 'ಚೆಕ್ ಮೇಟ್' ಶಿರೋನಾಮೆಯಲ್ಲಿ ಕನ್ನಡಕ್ಕೆ ಬಂದಿವೆ. ಇಲ್ಲಿನ ಪ್ರತಿ ಕಥೆಗಳೂ ನಮ್ಮ ಮುಂದಿನ ಪೀಳಿಗೆಗೆ ಅಗತ್ಯ ಮೌಲ್ಯಗಳಾದ ಛಲ, ಕ್ರೀಡಾಸ್ಫೂರ್ತಿ, ಸೌಹಾರ್ದತೆ, ಹೋರಾಟ, ಪ್ರೀತಿ ಮತ್ತು ಮಾನವೀಯ ಕಾಳಜಿಗಳನ್ನು ಗೊಡ್ಡು ಉಪದೇಶಗಳಂತೆ ಬೋಧಿಸದ ಅತ್ಯಂತ ಸಹಜವಾಗಿಯೇ ಮನೋಲೋಕಕ್ಕೆ ದಾಟಿಸುತ್ತವೆ.
ಮಕ್ಕಳ ಕ್ರಿಕೆಟ್, ದೇಶಭಕ್ತಿ, ಸೌಹಾರ್ದತೆ, ಮಮತೆ ಮತ್ತು ಪರೋಪಕಾರಿ ಗುಣ ಹೀಗೆ ಮಕ್ಕಳ ಮನಸ್ಸನ್ನು ಆರೋಗ್ಯಯುತವಾಗಿಡುವಂತಹ ಮತ್ತು ರಂಜನೀಯವೂ ಆದಂತಹ ವಿಷಯ ವಸ್ತುಗಳು ಮಕ್ಕಳ ಮನೋಲೋಕವನ್ನು ತೀವ್ರವಾಗಿ ಸೆಳೆಯುವುದಲ್ಲದೆ ಸಮಾಜದ ಆರೋಗ್ಯಕ್ಕೂ ಸಹಕಾರಿಯಾಗಬಲ್ಲವು. ಅನುವಾದ ಕೂಡ ಒಂದು ಸೃಷ್ಟಿಶೀಲ ಕ್ರಿಯೆಯಾಗಿದ್ದು, ಇಲ್ಲೂ ಭಾವಬೆಸುಗೆ ಒಪ್ಪವಾಗಿರುವುದು ಗೋಚರಿಸುತ್ತದೆ. ಸಹೃದಯ ಓದುಗನನ್ನು ಲೇಖಕನೊಂದಿಗೆ ನೇರವಾಗಿ ತಾದಾತ್ಮಗೊಳಿಸುವ ಸೇತುವೆಯಾಗಿ ಇಲ್ಲಿನ ಅನುವಾದವು ತನ್ನ ಕರ್ತವ್ಯವನ್ನು ನಿರ್ವಹಿಸಿದೆ. ಪಟೇಲರು ಇದನ್ನು ಅಚ್ಚುಕಟ್ಟಾಗಿ ಹದಗೊಳಿಸಿದ್ದಾರೆ. ಮೂಲ ಪ್ಲೇವರ್ ಕೆಡದೆ ಕನ್ನಡ ಭಾಷೆಯ ಸೊಗಡನ್ನೂ ಬಿಟ್ಟುಕೊಡದೆ ವಿಶಿಷ್ಟ ರೆಸಿಪಿ ಸಿದ್ಧಗೊಳಿಸಿ ಓದುಗರಿಗೆ ಉಣಬಡಿಸಿದ್ದಾರೆ. ಇವರಿಂದ ಮತ್ತಷ್ಟು ಉತ್ತಮ ಕಥೆಗಳು ಕನ್ನಡಕ್ಕೆ ಬರಲಿ ಎಂದು ಆಶಿಸುತ್ತಾ, ಇವರ ಈ ಕಾರ್ಯಕ್ಕಾಗಿ ಅಭಿನಂದಿಸುತ್ತೇನೆ’ ಎಂದಿದ್ದಾರೆ.
©2024 Book Brahma Private Limited.