ಮಲಯಾಳಂ ಲೇಖಕ ಪಿ.ಕೆ.ಪಾರಕ್ಕಡವು ಅವರ ಸಣ್ಣಕಥೆಗಳನ್ನು ಅನುವಾದಕಿ ಪಾರ್ವತಿ ಜಿ. ಐತಾಳ ಅವರು ಕನ್ನಡೀಕರಿಸಿದ್ದಾರೆ. ಏಕಕಾಲದಲ್ಲಿ ಕಣ್ಣುಕೋರೈಸುವ ನಕ್ಷತ್ರದ ಹೊಳಪಿನಂತೆಯೂ ಓದುಗನ ಮನಸ್ಸನ್ನು ಥಟ್ಟನೆ ಹಿಡಿದಿಡುವ ಉಲ್ಕೆಯಂತೆಯೂ ಕಾಣುವ ಕಥೆಗಳಿವು. ಕಾಲವು ನಕ್ಷತ್ರಗಳನ್ನು ಪೋಣಿಸಿ ಮಾಲೆಕಟ್ಟಿ ಆಗಸವನ್ನು ಸಿಂಗರಿಸುವಂತೆ ಕಾಣುವ ಈ ಕಥೆಗಳು ಬಹಳ ಎಚ್ಚರಿಕೆಯಿಂದ ಹೆಣೆದಂಥವು. ಇವುಗಳಲ್ಲಿ ಬದುಕಿನ ರಕ್ತ, ಕಣ್ಣೀರಿನ ಉಪ್ಪು ಮತ್ತು ಕನಸುಗಳ ದ್ರಾಕ್ಷಾರಸಗಳು ಸಮಪ್ರಮಾಣದಲ್ಲಿ ಕರಗಿ ಸೇರಿಕೊಂಡಿವೆ.
ಆಧುನಿಕ ಬದುಕಿನ ನೋವು, ಹತಾಶೆ, ತಲ್ಲಣ, ಮಹಾಮೌನಗಳು, ಋತುಭೇದ ಹಾಗೂ ಪ್ರಣಯೋನ್ಮಾದಗಳು ಇಲ್ಲಿ ಅಂತರ್ಧಾರೆಯಾಗಿ ಪ್ರವಹಿಸುತ್ತವೆ. ಗಾಢವಾದ ಜೀವನಾನುಭವಗಳನ್ನು ಪುಟ್ಟ ಪುಟ್ಟ ವಾಕ್ಯಗಳಲ್ಲಿ ಹಿಡಿದಿಟ್ಟು ಕಾವ್ಯಾತ್ಮಕವಾಗಿ ಅತಿ ಸೂಚ್ಯವಿಧಾನದಲ್ಲಿ ಹೇಳುವ ಈ ಕಥೆಗಳಲ್ಲಿ ಒಂದು ಫಿಲಾಸಫಿಯೂ ಇದೆ. ಆ ಫಿಲಾಸಫಿಯ ಒಳತಿರುಳೇ ಪಾರಕ್ಕಡವು ಅವರ, ಕಡಲ ಮೊರೆತಕ್ಕೆ ಕಿವಿಯಾಗಿಸುವ ಈ ಕಥೆಗಳ ಜೀವಾಳ. ಕನ್ನಡದಲ್ಲಿ ಇಷ್ಟೊಂದು ವೈಶಿಷ್ಟ್ಯಪೂರ್ಣ ಕಥೆಗಳು ಅಪರೂಪ.
©2024 Book Brahma Private Limited.