ಹರಿಲಾಲ್‌

Author : ಟಿ.ಎನ್. ವಾಸುದೇವ ಮೂರ್ತಿ

Pages 204

₹ 180.00




Year of Publication: 2020
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರ ನಗರ,ಶಿವಮೊಗ್ಗ 577201 ಪೋನ್
Phone: 9449886390

Synopsys

ಟಿ.ಎನ್‌ ವಾಸುದೇವ ಮೂರ್ತಿ ಬರೆದಿರುವ ಹರಿಲಾಲ್‌ ಜೀವನಚರಿತ್ರೆ. ಲೇಖಕರು ಹೇಳುವಂತೆ ‘ವ್ಯಕ್ತಿಯು ತನ್ನ ಆತ್ಮೋದ್ಧಾರದಿಂದ ಲೋಕಕಲ್ಯಾಣವನ್ನು ಸಾಧಿಸಬೇಕು ಎಂಬ ಸಂಕಲ್ಪದೊಂದಿಗೆ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಫಿನಿಕ್ಸ್‌ ಆಶ್ರಮ ಸ್ಥಾಪಿಸಿದರು. ಈ ಸಂಕಲ್ಪದ ಹಾದಿಯಲ್ಲಿ ನಡೆಯಲು ಗಾಂಧಿ ಕೆಲವು ಕಠೋರ ವಿಧಾನಗಳನ್ನು ಅಳವಡಿಸಿದರು. ಈ ವಿಧಾನವನ್ನು ಮೊದಲು ವಿರೋಧಿಸಿದ್ದು, ಗಾಂಧಿಯ ಹಿರಿಯ ಮಗ ಹರಿಲಾಲ್. ಹರಿಲಾಲ್‌ಗೆ ಗಾಂಧಿಯೊಂದಿಗೆ ಹಲವು ವಿಚಾರಗಳಲ್ಲಿ ಅಭಿಪ್ರಾಯ ಭೇದವಿತ್ತು. ತನ್ನ ಹಾಗೂ ಗಾಂಧಿಯ ಸಂಬಂಧ ಗೌಪ್ಯವಾಗಿರಬೇಕು ಮತ್ತು ಖಾಸಗಿಯಾಗಿರಬೇಕು ಎನ್ನುವುದನ್ನು ಹರಿಲಾಲ್‌ ಬಯಸಿದ್ದ ಎನ್ನುವ ವಿಚಾರಗಳನ್ನು ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ. ಹರಿಲಾಲ್ ಚಾರಿತ್ರ್ಯವನ್ನು ಆವರಿಸಿರುವ, ಲೋಕದ ಜನಕ್ಕೆ ಈಗಾಗಲೇ ತಿಳಿದೇ ಇರುವ, ಕಪ್ಪುಮಸಿಯನ್ನು ಒರೆಸಿ ಅವನೊಳಗೆ ಸದಾಕಾಲ ನೆಲೆಸಿದ್ದ ಸಾತ್ವಿಕ ಸ್ವಭಾವವನ್ನು, ಅರಿವಿನ ಪರಿಶುದ್ಧ ಬೆಳಕನ್ನು ಶೋಧಿಸುವುದು; ಸ್ವಂತ ಅಭಿಪ್ರಾಯಗಳನ್ನು ಬದಿಗಿಟ್ಟು, ವಾಸ್ತವಾಂಶಗಳನ್ನಷ್ಟೇ ಪರಿಗಣಿಸಿ, ಹರಿಲಾಲ್‌ನ ಅಧಃಪತನಕ್ಕೆ ಕಾರಣವಾದ ಅಂಶಗಳನ್ನು ನಿರ್ಲಿಪ್ತವಾಗಿ ಅವಲೋಕಿಸುವುದು; ಎಲ್ಲಕ್ಕಿಂತ ಮಿಗಿಲಾಗಿ ಹರಿಲಾಲ್‌ ನೆಲೆಯಲ್ಲಿ ನಿಂತು ಗಾಂಧಿಯ ಅಂತರ್ಯವನ್ನು ಇನ್ನು ಸಮೀಪದಿಂದ ಸಹಾನುಭೂತಿಯಿಂದ ನೋಡುವುದು ಈ ಕೃತಿಯ ಮುಖ್ಯ ಆಶಯವಾಗಿದೆ ಎಂದು ಹೇಳಿದ್ದಾರೆ.

About the Author

ಟಿ.ಎನ್. ವಾಸುದೇವ ಮೂರ್ತಿ
(30 December 1974)

ಟಿ.ಎನ್.ವಾಸುದೇವ ಮೂರ್ತಿ ಅವರು ಕಿ.ರಂ.ನಾಗರಾಜ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಅಲ್ಲಮ ಪ್ರಭುವಿನ ವಚನಗಳ ದಾರ್ಶನಿಕ ಮರುಚಿಂತನೆಯ ವಿಭಿನ್ನ ಸ್ವರೂಪಗಳು ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನದ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಶಸ್ತಿ ಸಂದಿದೆ. ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ (ತೌಲನಿಕ ಸಾಹಿತ್ಯ) ಪದವಿಯನ್ನು ಪಡೆದ ಮೇಲೆ ಬೆಂಗಳೂರಿನ ಹಲವು ಪ್ರಮುಖ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ನ್ಯಾಷನಲ್  ಕಾಲೇಜು, ಜೈನ್ ವಿಶ್ವವಿದ್ಯಾಲಯ ಕಾವ್ಯಮಂಡಲ ಮೊದಲಾದ ಕನ್ನಡ ಸ್ನಾತಕೋತ್ತರ ಕೇಂದ್ರಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಎಂ.ಎ. ಹಾಗೂ ಎಂ.ಫಿಲ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಓಶೋ ನೇರ ಶಿಷ್ಯರಾದ ಸ್ವಾಮಿ ಆನಂದ್ ಪ್ರಭಾವದಿಂದ ದೀಕ್ಷೆ ...

READ MORE

Reviews

ಹರಿಲಾಲ್‌ ಕೃತಿಯ ವಿಮರ್ಶೆ

ಇದು ಮಹಾತ್ಮ ಗಾಂಧಿಯವರ ಹಿರಿಯ ಮಗ ಹರಿಲಾಲನ ಬದುಕಿನ ಕುರಿತ ಪುಸ್ತಕ. ಕೃತಿಕಾರರೇ ಬರೆದಿರುವ ಮುನ್ನುಡಿಯಲ್ಲಿ ಪ್ರಾಮಾಣಿಕ ಪ್ರಯತ್ನದಂತೆ ತೋರುವ ಕೆಲವು ಮಾತುಗಳಿದ್ದರೂ ಈ ಕೃತಿಯ ನಿಗೂಢ ರಾಜಕೀಯ ಕಾರ್ಯಸೂಚಿ ಅಷ್ಟು ಸರಳವಾಗಿಲ್ಲ. “ಎಲ್ಲಕ್ಕಿಂತ ಮಿಗಿಲಾಗಿ ಹರಿಲಾಲ್ ನೆಲೆಯಲ್ಲಿ ನಿಂತು ಗಾಂಧಿಯ ಆಂತರ್ಯವನ್ನು ಇನ್ನೂ ಸಮೀಪದಿಂದ, ಸಹಾನುಭೂತಿಯಿಂದ ನೋಡುವುದು ಈ ಕೃತಿಯ ಮುಖ್ಯ ಆಶಯವಾಗಿದೆ. ಒಬ್ಬ ಮಗನ ನೆಲೆಯಲ್ಲಿ ನಿಂತು ನೋಡಿದಾಗಲಷ್ಟೇ ರಾಷ್ಟ್ರಪಿತನ ವಿಶ್ವರೂಪದ ಸಮೀಪದರ್ಶನ ನಮಗಾಗಬಲ್ಲದು” ಎಂಬ ಮಾತಿನಲ್ಲಿರುವ  ವ್ಯಂಗ್ಯ ಪುಸ್ತಕದುದ್ದಕ್ಕೂ ಬೇರೆಬೇರೆ ರೂಪದಲ್ಲಿ ಹರಿದಿದೆ. ಲೇಖಕರ ಮಾತಿನ ಪ್ರಕಾರ ಕೃತಿಯನ್ನು ಕಟ್ಟಿರುವ ಮುಖ್ಯ ನಂಬಿಕೆಗಳಿವು: 'ಗಾಂಧೀಜಿ ಮಗನನ್ನು ನಿರ್ಲಕ್ಷಿಸಿದರು. ಮಗನ ನೆನಪಿನ ಕುರುಹುಗಳನ್ನು ನಾಶಪಡಿಸಬೇಕು ಎಂದು ಆಜ್ಞಾಪಿಸಿದ್ದರು. ತಾನು ಸರಿದಾರಿಯಲ್ಲಿಯೂ, ಮಗ ತಪು ಹಾದಿಯಲ್ಲಿದ್ದಾನೆಂದೂ ಅವರು ದೃಢ ವಾಗಿ ನಂಬಿಕೊಂಡಿದ್ದರು. ಈ ತಲೆಬುಡ ಇಲ್ಲದ ನಂಬಿಕೆಯನ್ನು ಸಂಗಡಿಗರ ತಲೆಗೂ ತುಂಬುತ್ತಿದ್ದರು. ಇದುವೆ ಗಾಂಧಿಯ ದುರಂತ. ಈ ದುರಂತದ ಫಲವನ್ನು ಉಂಡವನು ಹರಿಲಾಲ. ಹರಿಲಾಲ ಗಾಂಧಿಯಷ್ಟು ಕಠೋರ ಸಾಧಕನಲ್ಲ, ಆದರೆ ಗಾಂಧಿಗಿಂತ ಶ್ರೇಷ್ಠಮಟ್ಟದ ಆಧ್ಯಾತ್ಮಿಕ ಜಿಜ್ಞಾಸು. ಗಾಂಧಿ ವಿರಕ್ತಿ ಸಾಧಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದ ವಿಲಕ್ಷಣ ತಂದೆ. ಹರಿಜನರಿಗೆ ಪ್ರತ್ಯೇಕ ಮತಕ್ಷೇತ್ರದ ಅಗತ್ಯವಿಲ್ಲ ಎಂದು ತಮಗೆ ಅನ್ನಿಸಿದ ಮಾತ್ರಕ್ಕೆ ಸತ್ಯವನ್ನು ಎತ್ತಿ ಹಿಡಿದಂತಾಗುತ್ತದೆ ಎಂದು ಭಾವಿಸಿ ಆಮರಣಾಂತ ಉಪವಾಸ ವ್ರತ ಕೈಗೊಂಡ ಗಾಂಧಿ ಒಬ್ಬ ಸರ್ವಾಧಿಕಾರಿ. ತಂದೆ ಮಕ್ಕಳ ತಿಕ್ಕಾಟ ಎರಡು ಘನವಾದ ವ್ಯಕ್ತಿತ್ವಗಳ ನಡುವಿನ ಘರ್ಷಣೆಯಾಗಿತ್ತು. ಎರಡು ವಿಭಿನ್ನ ಸಿದ್ದಾಂತಗಳ ನಡುವಿನ ಭಿನ್ನಾಭಿಪ್ರಾಯವಾಗಿತ್ತು. ಒಬ್ಬರ ಪಾಲಿನ ಸತ್ಯಾಗ್ರಹ ಮತ್ತೊಬ್ಬನ ಪಾಲಿನ ಹಟಮಾರಿತನವಾಗಿತ್ತು' ಇತ್ಯಾದಿ ಇತ್ಯಾದಿ.

ಆಕರ್ಷಕವಾದ ಭಾಷೆಯಿಂದ ವಾಕ್ಯವಾಕ್ಯಗಳನ್ನೂ ವ್ಯಾಖ್ಯಾನೋದ್ಯಮದಲ್ಲಿ ತೊಡಗಿಸಿ, ಪುಸ್ತಕವನ್ನು “ಕುರ್ಕುರೆ' ತಿಂಡಿಯಂತೆ ತಯಾರಿಸಿರುವ ಕೃತಿಕಾರರು ಇವೆಲ್ಲವನ್ನು ಗಾಂಧೀವಿರೋಧದ ಪ್ಯಾಕೆಟ್‌ನಲ್ಲಿ ತುಂಬಿಸಿದ್ದಾರೆ. ಗಾಂಧೀಚಿಂತನೆಯ ಕುರಿತು ಜಾಗತಿಕವಾಗಿ ನಡೆಯುತ್ತಿರುವ ಬೌದ್ಧಿಕ ವಾಗ್ವಾದಕ್ಕೆ ಹೊಸದಾಗಿ ಸೇರಿಸಬಹುದಾದ ಯಾವೊಂದು ಅಂಶವೂ ಇಲ್ಲದ ಈ ಕೃತಿ ಸತ್ಯಾನ್ವೇಷಣೆಯ ಸೋಗಿನಲ್ಲಿ ಹೊರಟಿದೆ. ಆದರೆ ಇಲ್ಲಿ ತಾನು ನಂಬಿದ್ದನ್ನು ಪ್ರತಿಪಾದಿಸುವ ಕಾರ್ಯಕರ್ತನೊಬ್ಬನ ಅಮಿತೋತ್ಸಾಹವಿದೆಯೇ ಹೊರತು ನಿಜಾನ್ವೇಷಕನೊಬ್ಬನಿಗೆ ಇರಲೇಬೇಕಾದ ಹುಡುಕಾಟದ, ಸ್ವತಂತ್ರ ಆಲೋಚನೆಯ ಮನೋಧರ್ಮವೇ ಇಲ್ಲ.

ಗಾಂಧಿಯವರ ಚಿಂತನೆ ಮತ್ತು ರಾಜಕಾರಣದ ಮಾದರಿಯನ್ನು ವಿಮರ್ಶೆಗೊಳಪಡಿಸಿ ಸೈದ್ಧಾಂತಿಕವಾಗಿ ಗಾಂಧೀ ರಾಜಕಾರಣವನ್ನು ನಿರಾಕರಿಸಿದ ಕೆಲವು ಮಾದರಿಗಳು ನಮ್ಮ ಮುಂದಿವೆ. ಅವುಗಳಲ್ಲಿ ಇಂದು ಬಲಿಷ್ಠವಾಗಿ ಕಾಣುವ ಹಿಂದುತ್ವದ ಬಲಪಂಥೀಯ ರಾಜಕಾರಣ, ಭಾರತದ ಸಂಘಟಿತ ಕಮ್ಯುನಿಸ್ಟ್ ಚಳವಳಿಯ ರಾಜಕಾರಣ, ಬಹುಜನ ಸಮಾಜದ ರಾಜಕಾರಣ ಮತ್ತು ಸ್ವಾತಂತ್ರ್ಯೋತ್ತರದಲ್ಲಿ | ಗಾಂಧೀಚಿಂತನೆಯನ್ನು ನೇರವಾಗಿ ತಿರಸ್ಕರಿಸದಿದ್ದರೂ 'ಗಾಂಧೀವಾದ' ಮತ್ತು ರಾಜಕಾರಣವನ್ನು ವ್ಯವಸ್ಥಿತವಾಗಿ ಅಪ್ರಸ್ತುತಗೊಳಿಸಿರುವ ಕಾಂಗ್ರೆಸ್ ಪಕ್ಷದ ಅಸ್ತವ್ಯಸ್ತ ರಾಜಕಾರಣ ಪ್ರಮುಖವಾದವುಗಳು. ಆದರೆ ಈ ಕೃತಿಗೆ ಅಂಥ ಯಾವ ತಾತ್ತಿಕ ಭಿನ್ನಾಭಿಪ್ರಾಯಗಳಾಗಲೀ, ಗಂಭೀರ ಶೈಕ್ಷಣಿಕ ಆಸಕ್ತಿಗಳಾಗಲೀ ಇದ್ದಂತಿಲ್ಲ. ಒಂದು ವೇಳೆ ಹರಿಲಾಲನೆಂಬ ದಾರಿತಪ್ಪಿದ ಮಗನ ಅಡ್ಡಾದಿಡ್ಡಿ ಬದುಕನ್ನು ಕರುಣಾಜನಕವಾಗಿ ವರ್ಣಿಸುವುದಷ್ಟೇ ಇದರ ಉದ್ದೇಶವಾಗಿದ್ದರೂ ಆಕ್ಷೇಪವಿರುತ್ತಿರಲಿಲ್ಲ. ಆದರೆ ಇದು ಅರೆ ಸತ್ಯಗಳ (ಅಸ್ಪಶ್ಯನ ಮಲದ ಮಡಕೆಯನ್ನು ಸ್ವಚ್ಚಗೊಳಿಸಲು ಕಸ್ತೂರ್‌ಬಾ ನಿರಾಕರಿಸಿದ ಉನ್ನತ ವಿದ್ಯಾಭ್ಯಾಸಕ್ಕೆ ಗಾಂಧಿ ಹರಿಲಾಲನಿಗೆ ಬದಲಾಗಿ ಛಗನಲಾಲ್‌ನನ್ನು ಕಳಿಸಿದರೆಂಬ) ಜೊತೆಗೆ ಅಪವ್ಯಾಖ್ಯಾನಗಳ (ಬಾಲಕ ರಾಮದಾಸ್ ಹಣ ಕದ್ದ ಪ್ರಸಂಗ) ಮೂಲಕ ಗಾಂಧಿಯವರ ವ್ಯಕ್ತಿತ್ವವನ್ನು ವಿರೂಪಗೊಳಿಸುವುದಕ್ಕೆ ತೊಡಗಿದೆ. ಮಾತ್ರವಲ್ಲ ಮಹಾದೇವ ದೇಸಾಯಿಯವರು ಕರ್ನಾಟಕದವರೆಂಬ ತಪ್ಪು ಮಾಹಿತಿಯನ್ನೂ ಕೊಡುತ್ತಿದೆ. 'ರಾಷ್ಟ್ರಪಿತನ ವಿಶ್ವರೂಪದ ಸಮೀಪ ದರ್ಶನ'ಕ್ಕೆ ಹೊರಟ ಈ ಜೀವನಚರಿತ್ರೆ ಎಷ್ಟು ಕ್ಷುಲ್ಲಕವಾಗಿದೆಯೆಂದರೆ, ಅದು ಗಾಂಧಿಯವರು ಪರಿಕಲ್ಪಿಸಿದ 'ಸತ್ಯಾಗ್ರಹ'ವೆಂಬ ಗಹನವಾದ ತತ್ವಜ್ಞಾನದ ಮುಂದೆ 'ಹಟಮಾರಿತನವೆಂಬ ವ್ಯಕ್ತಿಯ ಸ್ವಭಾವವನ್ನು ಎದುರುಬದುರಾಗಿಸಿ ಅದನ್ನು ಹಾಸ್ಯಾಸ್ಪದಗೊಳಿಸಲಾಗಿದೆ. ಅಥವಾ ಇದನ್ನು ಹೀಗೂ ಹೇಳಬಹುದು. ಘಟನೆಗಳನ್ನು ಆಯ್ದು ವ್ಯಾಖ್ಯಾನಗಳನ್ನು ಪೋಣಿಸುವ ಕೃತಿಕಾರರ ಕೈಚಳಕದಲ್ಲಿರುವ ಇಂಗಿತವೆಂದರೆ ಗಾಂಧಿಯದ್ದೇ ಹಟಮಾರಿತನ, ಹರಿಲಾಲನದ್ದು ಮಾತ್ರ ಸತ್ಯಾಗ್ರಹ.

ನನ್ನ ಗಮನಕ್ಕೆ ಬಂದಂತೆ ಕೃತಿಕಾರರು ಇಲ್ಲಿ ಉಲ್ಲೇಖಿಸುವ ಯಾವ ಪುಸ್ತಕವೂ ಹರಿಲಾಲನನ್ನು ಮುಂದಿಟ್ಟುಕೊಂಡು ಹೀಗೆ ವಾರೆನೋಟದಲ್ಲಿ ಗಾಂಧಿಯವರನ್ನು ಕುಬ್ಧಗೊಳಿಸುವ ಪ್ರಯತ್ನ ಮಾಡಿಲ್ಲ. ಹರಿಲಾಲ ತಮ್ಮನ್ನು ಭೇಟಿ ಮಾಡಿದ ಕೊನೆಯ ಸಲ ಗಾಂಧಿ ಹೇಳುವ “ನನ್ನ ಕೊನೆಯ ಆಸೆ ನಿನ್ನ ತೊಡೆಯ ಮೇಲೆ ತಲೆ ಇಟ್ಟು ಪ್ರಾಣ ಬಿಡುವುದು' ಎಂಬ ಮಾತು ಅವರಿಬ್ಬರ ಸಂಬಂಧದ ಸಂಕೀರ್ಣತೆಯ ಬಗ್ಗೆ ಎಲ್ಲವನ್ನೂ ಹೇಳುತ್ತದೆ. ಹಾಗಾಗಿ ಈ ಕೃತಿಯಲ್ಲಿ ಗಾಂಧಿಯವರ ಸಮೀಪದರ್ಶನವಾಗುವುದಕ್ಕಿಂತಲೂ ಲೇಖಕರ ರಾಜಕೀಯ ಉದ್ದೇಶದ ಸಮೀಪದರ್ಶನವಾಗುತ್ತಿದೆ.

ಈ ಪುಸ್ತಕವನ್ನು ಓದಿದ ಬಳಿಕ ನನಗನ್ನಿಸುವುದೇನೆಂದರೆ, ನಮ್ಮ ಕಾಲದಲ್ಲಿ ದಾರಿತಪ್ಪಿದ, ಆದರೆ ನಮ್ಮವರೇ ಆಗಿರುವ ಕೆಲವು ಕಿಡಿಗೇಡಿಗಳು ಗಾಂಧಿ ಪ್ರತಿಮೆಯನ್ನೋ, ಅಂಬೇಡ್ಕರ್ ಪ್ರತಿಮೆಯನ್ನೋ ವಿರೂಪಗೊಳಿಸುವುದನ್ನು ನಾವು ನೋಡಿದ್ದೇವೆ. ಅಂಥ ಮನಸಿದ್ದೂ, ಬೀದಿಯಲ್ಲಿ ಅನ್ನು ಮಅಡುವುದಕ್ಕೆ ಅಂಜುವವರು ಏನು ಮಾಡಬಹುದು ಎಂಬುದಕ್ಕೆ ಈ ಪುಸ್ತಕ ಒಂದು ತಾಜಾ ಉದಾಹರಣೆ.

(ಕೃಪೆ: - ಹೊಸ ಮನುಷ್ಯ ಎಪ್ರಿಲ್‌ 2021, ಬರಹ: ನಿತ್ಯಾನಂದ ಬಿ.ಶೆಟ್ಟ, )‌

Related Books