ಹದಿನೈದನೆಯ ಶತಮಾನದ ಮಹಾನ್ ಸೂಫಿ ಸಂತ, ತತ್ವಜ್ಞಾನಿ, ಕವಿ-ಲೇಖಕ ಬಂದೇ ನವಾಜ್ ಅವರ ಬದುಕು- ಸಾಹಿತ್ಯ ಕುರಿತ ಗ್ರಂಥ. ತಾತ್ವಿಕತೆಯ ಕಾರಣಕ್ಕಾಗಿ ಜಾಗತಿಕ ನಕಾಶೆಯಲ್ಲಿ ತನ್ನದೇ ಛಾಪು ಮೂಡಿಸಿದ ಬಂದೇ ನವಾಜ್ ರು ಕವಿ-ಲೇಖಕರಾಗಿ ಅದೇ ತಾತ್ವಿಕತೆಯನ್ನು ಬರಹದಲ್ಲಿ ತಂದವರು. ಅದೆಲ್ಲಕ್ಕಿಂತ ಹೆಚ್ಚಾಗಿ ಜೀವಪರ=ಜನಪರ ನಿಲುವು ಹೊಂದಿದ್ದ ‘ಸೈಯದ್ ಮಹ್ಮದ್ ಹುಸೇನಿ ಗೇಸುದರಾಜ್’ ಅವರು ದೀನರ- ಸಂಕಷ್ಟಕ್ಕೆ ಒಳಗಾದವರ ನೋವಿಗೆ ಮಿಡಿದವರು. ಅದೇ ಕಾರಣಕ್ಕಾಗಿ ‘ಬಂದೇ ನವಾಜ್’ (ಸಾಮಾನ್ಯರ ದೊರೆ) ಎಂದು ಹೆಸರಾದವರು. ದೆಹಲಿಯಲ್ಲಿ ಹುಟ್ಟಿ ಮಹಮದ್ ಬಿನ್ ತುಘಲಕ್ ನ ರಾಜಧಾನಿ ಸ್ಥಳಾಂತರದ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ದಖನ್ನಿಗೆ ಬಂದಿದ್ದ ಸೈಯದ್ ಹುಸೇನಿ ಅವರು ಖುಲ್ದಾಬಾದ್ ನಲ್ಲಿ ಇದ್ದ ಬಾಲ್ಯದ ದಿನಗಳಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದರು. ರಾಜಧಾನಿಯ ಮರುಸ್ಥಳಾಂತರದ ಸಂದರ್ಭದಲ್ಲಿ ದೆಹಲಿಗೆ ಮರಳಿದ್ದ ಅವರು ಚಿಸ್ತಿಯಾ ಪರಂಪರೆಯ ನಾಸಿರುದ್ದೀನ್ ಚಿರಾಗ್ ದೆಹಲ್ವಿ ಅವರಿಂದ ದೀಕ್ಷೆ (ಬಯಾತ್) ಪಡೆದಿದ್ದರು. ಗೇಸು ದರಾಜ್ (ಉದ್ದ ಕೂದಲಿನವನು) ಅವರು ‘ಬಂದೇ ನವಾಜ್’ ಆಗುವ ದಾರಿಯಲ್ಲಿ ಕ್ರಮಿಸಿದರ ರೀತಿ. ಅವರ ತಾತ್ವಿಕತೆ – ಬರವಣಿಗೆಯ ಮಹತ್ವವನ್ನು ವಿವರಿಸುವ ಕನ್ನಡದ ಮೊದಲ ಪ್ರಮುಖ ಗ್ರಂಥ ಇದಾಗಿದೆ. ಅದೇ ಕಾರಣಕ್ಕಾಗಿ ಇದಕ್ಕೊಂದು ಸಾಹಿತ್ಯಕ-ಸಾಂಸ್ಕೃತಿಕ ಮಹತ್ವದ ಜೊತೆಗೆ ಐತಿಹಾಸಿಕ ಪ್ರಾಮುಖ್ಯತೆಯು ಇದೆ.
ಕಲಬುರಗಿಯ ಮಹಾನ್ ಸೂಫಿ ಸಂತ ಬಂಧೇ ನವಾಜ್ ಅವರ ಕುರಿತು ಬೋಡೆ ರಿಯಾಜ್ ಅಹ್ಮದ್ ತಿಮ್ಮಾಪುರಿ ಅವರು ಈ ಕೃತಿಯನ್ನು ರಚಿಸಿದ್ದಾರೆ. ಬಂದೇ ನವಾಜ್ ಕುರಿತು ಬಿಡಿ ಬಿಡಿ ಬರಹಗಳು ಬಂದಿವೆಯಾದರೂ ಸಮಗ್ರ ನೋಟದ ಕೊರತೆ ಇತ್ತು. ಆ ಕೊರತೆಯನ್ನು ಈ ಕೃತಿ ನಿವಾರಿಸುತ್ತದೆ. ಸೂಫಿ ಸಾಹಿತ್ಯದ ಕುರಿತು ಆರಂಭದ ಜ್ಞಾನ ಬಯಸುವವರಿಗೆ ಉಪಯುಕ್ತವಾದ ಕೃತಿ.
©2024 Book Brahma Private Limited.