ಶಂ.ಬಾ. ಜೋಶಿಯವರ ’ಕರ್ಣಾಟ ಸಂಸ್ಕೃತಿಯ ಪೂರ್ವ ಪೀಠಿಕೆ’ ಕನ್ನಡ ನಾಡಿನ ಇತಿಹಾಸಪೂರ್ವ ಚರಿತ್ರೆ ಅವಲೋಕಿಸುವ ಮಹತ್ವದ ಗ್ರಂಥ. ಶಾತವಾಹನರ ಕಾಲದ ನಂತರದ ಕರ್ಣಾಟಕದ ಇತಿಹಾಸ ಮತ್ತು ಸಂಸ್ಕೃತಿಗಳನ್ನು ವಿಶ್ಲೇಷಿಸುವ ಗ್ರಂಥಗಳಿವೆ. ಆದರೆ ಅದಕ್ಕಿಂತ ಮುಂಚಿನ ಕರ್ಣಾಟಕದ ವಿಷಯಗಳನ್ನು ತಿಳಿಸುವ ಗ್ರಂಥಗಳ ಕೊರತೆಯನ್ನು ಈ ಪುಸ್ತಕ ನೀಗಿಸುತ್ತದೆ. ಕನ್ನಡನಾಡು ಯಾವ ನೆಲಗಟ್ಟಿನ ಮೇಲೆ ನಿಂತಿದೆ ಎಂದು ಅವಲೋಕಿಸುವ ಪ್ರಯತ್ನವನ್ನು ಶಂ.ಬಾ. ಅವರು ಮಾಡಿದ್ದಾರೆ. ಈ ವಿಷಯದ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಅನೇಕ ಹೊಸ ವಿಷಯ ತಿಳಿಸುತ್ತದೆ. ಈ ಗ್ರಂಥ ಓದುವಾಗ ಕಂಡುಬರುವ ಶಂ.ಬಾ. ಜೋಶಿಯವರ ಅಪಾರ ವಿದ್ವತ್ತು ಬೆರಗುಗೊಳಿಸುತ್ತದೆ. ಅವರು ಬಳಸುವ ಸಾಧನಗಳು – ಇತಿಹಾಸಪೂರ್ವ ಚರಿತ್ರೆ, ಮಾನವಶಾಸ್ತ್ರ, ಸಮಾಜಶಾಸ್ತ್ರ ಭಾಷಾಶಾಸ್ತ್ರ, ಶಾಸನಶಾಸ್ತ್ರ, ಸಾಹಿತ್ಯ ವೇದೋಪನಿಷತ್ತುಗಳು ಪುರಾಣಗಳು, ಐತಿಹ್ಯಗಳು ಮುಂತಾದ ಭಿನ್ನ ಶಾಸ್ತ್ರಗಳಿಗೆ ಸಂಬಂಧಪಟ್ಟವು. ಅವುಗಳನ್ನು ಉಪಯೋಗಿಸುವ ಪ್ರತಿಭೆ ಅಸಾಧಾರಣ.
©2024 Book Brahma Private Limited.