ಮಹಾಸತಿ ಆಚರಣೆಗೆ ಸಂಬಂಧಿಸಿದ ಮಾಹಿತಿ ಕಲೆಹಾಕಲು ರಾಜ್ಯದ ಹಲವಾರು ತಾಲ್ಲೂಕುಗಳಲ್ಲಿ ಅಧ್ಯಯನ ನಡೆಸಿ ಈ ಆಚರಣೆ ಕುರಿತು ವಿವರಣೆ ಹಾಗೂ ವಿಶ್ಲೇಷಣೆಗಳು ಸಮಗ್ರವಾಗಿ ಸಂಶೋಧನೆ ನಡೆಸಿರುವ ಕೃತಿ ಮಹಾಸತಿ ಆಚರಣೆ. ಸತಿಯ ಆಚರಣೆಗೆ ಸಂಬಂಧಿಸಿದಂತೆ ಪೂರಕ ಸಾಮಗ್ರಿಯಾಗಿ ಶಾಸನಗಳಿಂದ ದತ್ತವಾದ ದಾಖಲೆಗಳು ಹಾಗೂ ಹದಿನೈದನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನ- ದವರೆಗಿನ ವಿದೇಶೀ ಪ್ರವಾಸಿಗರ ಸತಿಯ ಘಟನೆಗಳ ಉಲ್ಲೇಖಗಳು ಮತ್ತು ಮಹಾಸತಿ ಜನಪದ ಗೀತೆಗಳೂ ಸೇರಿ-ಒಂದು ಪೂರ್ಣವಾದ ಮಾಹಿತಿ ಸಮಗ್ರವಾಗಿ ಈ ಕೃತಿಯಲ್ಲಿ ದೊರೆಯುತ್ತದೆ.
ಲೇಖಕರು ಈ ಕೃತಿಯ ಬಗ್ಗೆ ತಿಳಿಸುತ್ತಾ, ’ಮಧ್ಯಕಾಲೀನೋತ್ತರ ಕರ್ನಾಟಕ ರಾಜಕೀಯವಾಗಿ ಪಾಳೆಯಪಟ್ಟುಗಳಾಗಿ ಒಡೆದು ಹೋದ ಮೇಲೆ ಸಣ್ಣ ಸಣ್ಣ ಸೈನ್ಯ ಕಟ್ಟಲು ಜನರನ್ನು ಬಳಸಿಕೊಳ್ಳಲಾಯಿತು. ಊರ ಅಳಿವು, ಗೋಸಂಪತ್ತಿನ ಕೊಳ್ಳೆಗಳು ಹೆಚ್ಚು ಹೆಚ್ಚಾದವು. ಸಾಮಾನ್ಯ ಸೈನಿಕರ, ಊರ ಕಾಯುವವರ ಸಾವಿನ ಸಂಖ್ಯೆ ಮಿತಿಮೀರಿ- ಸಹಗಮನದಂಥ ಕ್ರೂರ ಆಚರಣೆಗೆ ಭಾರತದಲ್ಲಿ ಮತ್ತೆಲ್ಲೂ ಈ ಕಾಲದಲ್ಲಿ ಇಲ್ಲದಷ್ಟು ಕುಮ್ಮಕ್ಕು ಸಿಕ್ಕಿದ್ದು ಸಾಮಾನ್ಯ ಕನ್ನಡ ಭಾಷಿಕ ಸಮುದಾಯಗಳ ಒಂದು ವಿಷಾದ ಚರಿತ್ರೆಯೇ ಸರಿ. ಸಹಗಮನ ಈ ಕಾಲದಲ್ಲಿ ಎಷ್ಟರಮಟ್ಟಿಗೆ ಒಂದು ವಿಧಿಯುಕ್ತ ಆಚರಣೆಯಾಗಿತ್ತೆಂದರೆ, ಏನಕೇನ ಗಂಡ ಸತ್ತರೂ, ಹೆಂಡತಿಯಾದವಳು ಜೊತೆಗೂಡಿ ಸಾಯಬೇಕಾದಂಥ ವಾತಾವರಣ ನಿರ್ಮಾಣವಾಗಿತ್ತು. ಹೋರಾಟದ ಸಾಮಾನ್ಯ ಕುಲಕ್ಕೇ ಸೇರಿದ ಸಮುದಾಯಗಳು ಈ ದಾರುಣ ಘಟನೆಗೆ ಬಲಿಯಾದದ್ದು ಚರಿತ್ರೆಯ ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ. ಪುರೋಹಿತಶಾಹಿ ಮತ್ತು ಪಿತೃಪ್ರಧಾನ ವ್ಯವಸ್ಥೆಯು ತರ್ಕಬದ್ಧವಾಗಿ ನಡೆಸಿದ ಹೆಣ್ಣಿನ ಮೇಲಿನ ಈ ಶೋಷಣೆಯ ಸ್ವರೂಪವನ್ನು ವಿವರಗಳೊಡನೆ ತಿಳಿಯುವುದೂ, ನಮ್ಮ ಗತದ ಕರಾಳ ಸೂಕ್ಷ್ಮವನ್ನು ಅರಿಯುವಲ್ಲಿ ನೆರವಾಗುತ್ತದೆ. ಎನ್ನುವ ಲೇಖಕರ ಮಾತುಗಳು ಗತವೈಭವವನ್ನು ವೈಭವಿಸಿ ಹೇಳುವ ಚರಿತ್ರೆಯ ಮಾದರಿ ಎಷ್ಟು ಸುಳ್ಳು ಎನ್ನುವುದನ್ನು ವಿವರಗಳು ಎತ್ತಿಹಿಡಿಯುತ್ತವೆ.
©2024 Book Brahma Private Limited.