About the Author

ವೃತ್ತಿಯಿಂದ ಸಾರಿಗೆ ಇಲಾಖೆಯಲ್ಲಿ ಕಚೇರಿ ಅಧೀಕ್ಷಕರಾಗಿರುವ ರಿಯಾಜ್ ಅಹ್ಮದ್ ಅವರು ಪ್ರವೃತ್ತಿಯಿಂದ ಸಾಹಿತ್ಯ- ಕಾವ್ಯಪ್ರೇಮಿ. ಅಕ್ಷರಲೋಕದ  ಮೇಲಿನ ಅವರ ಆಸಕ್ತಿ, ಪ್ರೀತಿ, ಕಾಳಜಿಗಳು ಕೇವಲ ತೋರಿಕೆಗಾಗಿ ಅಲ್ಲ. ಅದು ಹವ್ಯಾಸಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಮೋಹ - ಹುಚ್ಚು ಸ್ವಂತ ಬರವಣಿಗೆ ಮತ್ತು ಅನುವಾದದ ವರೆಗೆ ವಿಸ್ತರಿಸಿಕೊಂಡಿದೆ. ಕವಿಪುತ್ರನಾಗಿರುವ ಕಾರಣಕ್ಕೆ ಬಾಲ್ಯದಲ್ಲಿ ದೊರೆತ ಸಂಸ್ಕಾರ, ತಿಮ್ಮಾಪುರದ ತಾತ್ವಿಕ- ಧಾರ್ಮಿಕ ಜಿಜ್ಞಾಸೆಗಳು ನೀಡಿದ ಅನುಭವಗಳು ಅವರನ್ನು ರೂಪಿಸಿವೆ. ಅನುಭವದ ಅರಿವು ವಿಸ್ತರಣೆಯಾಗಿ ಅನುಭಾವವಾಗಿದೆ.  ಅದು ಸೂಫಿ ಪ್ರೇಮದಲ್ಲಿ ಬಂದೇನವಾಜ್,  ಮಹಮೂದ್ ಬಹರಿ ಅವರ ಚಿಂತನೆಗಳ ಕನ್ನಡೀಕರಣದ ಮೂಲಕ ಅನಾವರಣಗೊಂಡಿದೆ. ಕಲಬುರಗಿ/ಗುಲ್ಬರ್ಗ ಪರಿಸರದ ಬದುಕು,  ಚಿಂತನೆ, ನಂಬಿಕೆಗಳ ಸಾಕಾರ ರೂಪದಂತಹ ಸಾಹಿತ್ಯ ಕೃತಿಗಳನ್ನು ರಚಿಸಿದ ಕವಿಗಳು ತಾಯ್ನನಾಡಿನಲ್ಲಿಯೇ ಅಪರಿಚಯಸ್ಥರು ಆಗಿರುವುದು ಸೋಜಿಗದ ಹಾಗೆ ವಿಷಾದದ ಸಂಗತಿ ಕೂಡ. ಭಾಷಿಕ, ಐತಿಹಾಸಿಕ ಕಾರಣಗಳ ಜೊತೆಯಲ್ಲಿ ಬೆರೆತ ಸಾಂಸ್ಕೃತಿಕ ರಾಜಕಾರಣವು ಈ ಬದಲಾವಣೆ, ಬೆಳವಣಿಗೆಗೆ ಕಾರಣ. ಕಂದಕ/ ಗೋಡೆ ಕಟ್ಟುವ ಶಕ್ತಿಗಳು ಕ್ರಿಯಾಶೀಲವಾಗಿರುವಾಗಲೇ ಕಂದಕ ಗಳಿಗೆ ಸೇತುವೆ ನಿರ್ಮಿಸುವ, ಕಲ್ಪಿತ ಗೋಡೆಗಳನ್ನು ಇಲ್ಲವಾಗಿಸುವ ಪ್ರಯತ್ನ ನಡೆಸಿದ್ದಾರೆ.

ಬೋಡೆ ರಿಯಾಜ್ ಅಹ್ಮದ್