ಕರಾವಳಿ ಕಥನಗಳು

Author : ಕೆ. ಚಿನ್ನಪ್ಪ ಗೌಡ

Pages 300

₹ 350.00




Year of Publication: 2022
Published by: ಸಂತ ಅಲೋಶಿಯಸ್
Address: ಮಂಗಳೂರು-1

Synopsys

‘ಕರಾವಳಿ ಕಥನಗಳು’ ಡಾ.ಕೆ. ಚಿನ್ನಪ್ಪ ಗೌಡರ ಸಂಶೋಧನ ಲೇಖನಗಳ ಸಂಕಲನ. ಇಲ್ಲಿ ಪಾಡ್ದನಗಳು ಬಗೆದು ಕಟ್ಟಿದ ಲೋಕದೃಷ್ಟಿ, ತುಳುವಿನ ಅಜ್ಜಿಕಥೆಗಳು, ಕೆಲಸ ಮತ್ತು ಕುಣಿತದ ಹಾಡುಗಳು, ಉಳ್ಳಾಲ್ತಿಯ ಪರಂಪರೆ ಮತ್ತು ಇತಿಹಾಸ, ಹೊಸ ತುಳು ಕಾವ್ಯ, ತಿಳಿ ಹೇಳುವ ತುಳು ಕತೆಗಳು, ತುಳು ತಲೆ ಎತ್ತಿ ನಿಲ್ಲುವ ಬಗೆ (ಅನುವಾದ ಮೀಮಾಂಸೆಯ ಕುರಿತ ಲೇಖನ ಇದು) ಮತ್ತು ಯಕ್ಷಗಾನದ ಇತಿಹಾಸ ಕಟ್ಟುವ ಕಷ್ಟದ ಕೆಲಸ- ಹೀಗೆ ಮುನ್ನೂರು ಪುಟಗಳ ಈ ಪುಸ್ತಕದಲ್ಲಿ ಎಂಟು ಸುದೀರ್ಘ ಸಂಶೋಧನ ಲೇಖನಗಳಿವೆ. ಈ ಕೃತಿಗೆ ಪ್ರೊ. ಪುರುಷೋತ್ತಮ ಬಿಳಿಮಲೆಯವರ ಮುನ್ನುಡಿ ಇದ್ದು, ಇದು “ತುಳುವಿನ ಘನತೆ ಹೆಚ್ಚಿಸುವ ಕೃತಿ” ಎಂದಿದ್ದಾರೆ. ಲೇಖಕರಾದ ಚಿನ್ನಪ್ಪ ಗೌಡರು ಈ ಎಂಟೂ ಸಂಶೋಧನ ಪ್ರಬಂಧಗಳ ವ್ಯಾಪ್ತಿ-ಉದ್ದೇಶ ಮತ್ತು ಆಶಯವನ್ನು ‘ಕಥನ ಕಾರಣ’ ಎಂಬ ತಮ್ಮ ಮಾತುಗಳಲ್ಲಿ ಹಿಡಿದಿಟ್ಟಿರುವುದರಿಂದ ಈ ಪುಸ್ತಕ ಏನನ್ನು ಉದ್ದೇಶಿಸಿದ ಪುಸ್ತಕ ಮತ್ತು ಏನನ್ನು ಮಾಡುವ ಪುಸ್ತಕ ಎಂಬುದು ಆರಂಭದಲ್ಲೇ ಸ್ಪಷ್ಟವಾಗುತ್ತದೆ. ಸರಳ, ನೇರ ಮತ್ತು ವಿವರ-ವಿವರ-ವಿವರ ಇವು ಚಿನ್ನಪ್ಪರ ಮಾತು ಮತ್ತು ಬರವಣಿಗೆಯ ಮೂಲಮಾತೃಕೆಗಳು. ಬಹಳ ಡಿಸ್ಕ್ರಿಪ್ಟಿವ್ ಮತ್ತು ಅನಲೆಟಿಕಲ್ ಆಗಿರುವ ಈ ಪುಸ್ತಕದ ಎಲ್ಲ ಲೇಖನಗಳು ತುಳು ಜಾನಪದ ಮತ್ತು ಸಾಹಿತ್ಯದ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಬರೆದ ಲೇಖನಗಳು. ತುಳುಭಾಷೆ, ಜಾನಪದ ಮತ್ತು ಸಾಹಿತ್ಯ ಇವುಗಳ ಮೋಹಕ ಮತ್ತು ಮಾಯಕದ ಲೋಕವನ್ನು ಇಲ್ಲಿಯ ಎಂಟೂ ಲೇಖನಗಳು ಓದುಗರಿಗೆ ಪದರುಪದರಾಗಿ ಪರಿಚಯಿಸುತ್ತವೆ. ಓರ್ವ ಶಿಸ್ತುಬದ್ಧ ಸಂಶೋಧಕರಾಗಿರುವ ಚಿನ್ನಪ್ಪ ಗೌಡರು ತಮ್ಮ ಪ್ರತಿಯೊಂದು ಲೇಖನದಲ್ಲೂ ಲೇಖನದ ಉದ್ದೇಶ, ವ್ಯಾಪ್ತಿ, ಅಧ್ಯಯನ ಕ್ರಮ ಮತ್ತು ಅಧ್ಯಯನಕ್ಕಿರುವ ಮುಂದಿನ ಸಾಧ್ಯತೆ ಇವನ್ನು ಬಹಳ ಸ್ಪಷ್ಟವಾಗಿ ದಾಖಲಿಸುತ್ತಾರೆ. ಅಷ್ಟೇ ಮುಖ್ಯವಾದುದು ಅವರು ಮಾಡುವ ಸಾಹಿತ್ಯ ಸಮೀಕ್ಷೆಯೂ ಕೂಡ. ಇಲ್ಲಿಯ ಎಲ್ಲ ಲೇಖನಗಳಲ್ಲಿ ಮೊತ್ತಮೊದಲಿಗೆ ಆ ಅಧ್ಯಯನ ವಿಷಯಕ್ಕೆ ಸಂಬಂಧಿಸಿದಂತೆ ನಡೆದಿರುವ ಅಗಾಧ ಕೆಲಸಕಾರ್ಯಗಳ ಸಮೀಕ್ಷೆಯನ್ನು ಚಿನ್ನಪ್ಪರು ಎಷ್ಟು ಅಚ್ಚುಕಟ್ಟಾಗಿ ಮಾಡುತ್ತಾರೆ ಎಂದರೆ ಒಬ್ಬ ಸಂಶೋಧನಾರ್ಥಿ ತನ್ನ ಸಂಶೋಧನೆಯ ಆರಂಭದಲ್ಲಿ ಮಾಡಲೇಬೇಕಾದ ಅತ್ಯಂತ ಪ್ರಮುಖ ಕೆಲಸ ಯಾವುದು ಎಂಬುದನ್ನೂ ಇದು ಹೇಳುವಂತಿದೆ.

About the Author

ಕೆ. ಚಿನ್ನಪ್ಪ ಗೌಡ

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ತಾಲ್ಲೂಕಿನ ಕೂಡೂರಿನವರಾದ ಸಾಹಿತಿ ಕೆ. ಚಿನ್ನಪ್ಪ ಗೌಡ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಎ.ವಿವೇಕ ರೈ ಅವರ ಮಾರ್ಗದರ್ಶನದಲ್ಲಿ ’ಭೂತಾರಾಧನೆ- ಜಾನಪದೀಯ ಅಧ್ಯಯನ’ ವಿಷಯದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಜಾಲಾಟ, ಭೂತಾರಾಧನೆ, ಭೂತಾರಾಧನೆ - ಜಾನಪದೀಯ ಅಧ್ಯಯನ, ಸಂಸ್ಕೃತಿ ಸಿರಿ, ಗೌಡ ಸಂಸ್ಕೃತಿ ಮತ್ತು ಆಚರಣೆಗಳು, ಸೇರಿಗೆ, ಕಿತ್ತಲೆ ಹಣ್ಣಲ್ಲ ಮುಂತಾದವು.  ...

READ MORE

Related Books