ಸುದೀರ್ಘ ಸಾಂಸ್ಕೃತಿಕ ಇತಿಹಾಸವಿರುವ ಪಾಂಚಾಳ ಅಥವಾ ವಿಶ್ವಕರ್ಮ ಸಮುದಾಯ ಕುರಿತು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳಲ್ಲಿ ಅಪಾರ ಮಾಹಿತಿ ಸಿಗುತ್ತದೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ವ್ಯಕ್ತಿ ಮತ್ತು ಜಾತಿ ಕೇಂದ್ರಿತವಾಗಿಸಿಕೊಂಡು ಮಾಡಿದ ಅಭಿಜಾತ ಮತ್ತು ಎಂಪೀರಿಕಲ್ ಅಧ್ಯಯನ ಮಾದರಿಗಳು ಪಾಂಚಾಳರಂತಹ ಕ್ರಿಯಾಶೀಲ ಸಮುದಾಯದ ನೆಲೆಗಳನ್ನು ಉಪೇಕ್ಷೆಗೆ ತಳ್ಳಿವೆ. ಬ್ರಾಹ್ಮಣ, ಲಿಂಗಾಯತ, ವೀರಶೈವ, ದಲಿತ, ಮಹಿಳೆ ಹೀಗೆ ವಿವಿಧ ಜಾತಿ ಅಥವಾ ಮತ ಆಧಾರಿತ ಅಧ್ಯಯನಗಳು ಕನ್ನಡದಲ್ಲಿ ನಡೆದಿವೆ. ಕರ್ನಾಟಕದ ರಾಜಕೀಯ, ಆರ್ಥಿಕ, ಧಾರ್ಮಿಕ, ಸಾಮಾಜಿಕ, ಚಾರಿತ್ರಿಕ ಹಾಗೂ ಸಾಂಸ್ಕೃತಿಕ ನಿರ್ಮಿತಿಗೆ ಕಾರಣವಾದ ಪಾಂಚಾಳ ಸಮುದಾಯದ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರತಿನಿಧೀಕರಣದ ವಿಧಾನಗಳೆಲ್ಲವೂ ಈ ಕಾರಣದಿಂದದ ಅಧೀನ ನೆಲೆಗಳಿಗೆ ಸೀಮಿತಗೊಂಡಿವೆ.
ಪಾಂಚಾಳ ಸಮುದಾಯ ಹಾಗೂ ಅವರ ತಿಳಿವನ್ನು ಕೇವಲ ಜಾತಿ ವರ್ಗ ಅಥವಾ ಸಮಾಜಶಾಸ್ತ್ರೀಯವಾದ ಅನುಕಂಪದ ಒಲವುಗಳಿಂದ ನೋಡದೆ, ಅವಗಣನೆಗೆ ಒಳಗಾದ ಅವುಗಳ ಬೌದ್ಧಿಕ ಹಾಗೂ ಸಾಂಸ್ಕೃತಿಕ ಚಹರೆಗಳನ್ನು ಕ್ರೋಢೀಕರಿಸಿ ನೋಡಬೇಕಾಗಿದೆ. ಸಾಮಾನ್ಯವಾಗಿ ಇಂಥ ಅಧ್ಯಯನಗಳು ಸಮುದಾಯದ ಭೌತಿಕ ಅಸ್ತಿತ್ವದಲ್ಲಿ ಆದ ಪಲ್ಲಟಗಳನ್ನು ಗುರುತಿಸುತ್ತವೆಯೇ ಹೊರತು ಆ ಸಮುದಾಯದ ಅರಿವಿನ ಪಲ್ಲಟದಲ್ಲಾದ ಸಂಗತಿಗಳನ್ನು ನೋಡುವುದಿಲ್ಲ ಹೀಗೆ ಅರಿವಿನ ಪಲ್ಲಟದ ರಾಜಕಾರಣವನ್ನು ಕಡೆಗಣಿಸಿ ಬೆಳೆಯುವ ಅಧ್ಯಯನಗಳಿಂದ ಯಾವುದೇ ಸಮುದಾಯದ ಏಳ್ಗೆಯನ್ನು ಬಯಸಲು ಸಾಧ್ಯವಿಲ್ಲ. ಇಂಥಹ ವಿಚಾರಗಳ ಆಳವಾದ ಅಧ್ಯಯನದೊಂದಿಗೆ ಈ ಕೃತಿ ರಚಿಸಲಾಗಿದೆ.
©2024 Book Brahma Private Limited.