ಪೊಲೀಸ್ ಅಧಿಕಾರಿ, ಲೇಖಕ ಡಾ. ಡಿ.ಸಿ. ರಾಜಪ್ಪ ಅವರ ಸಂಶೋಧನಾ ಕೃತಿ ʻಮೈಸೂರು ರಾಜ್ಯದಲ್ಲಿ ವಾಣಿಜ್ಯ ಮತ್ತು ಕರಕುಶಲ ಕಲೆಗಳುʼ. ಪುಸ್ತಕದ ಹಿನ್ನುಡಿಯಲ್ಲಿ ಡಾ. ಕೆ.ಎಸ್. ಶೀವಣ್ಣ ಅವರು, “ಡಾ. ಡಿ.ಸಿ. ರಾಜಪ್ಪನವರು ತಮ್ಮ ಅಧ್ಯಯನಕ್ಕೆ ಆರಿಸಿಕೊಂಡಿರುವ ವಿಷಯ ಮತ್ತು ಕಾಲದ ಚೌಕಟ್ಟು - ಎರಡೂ ವಿಶಿಷ್ಟವಾಗಿವೆ. ಅವರು ಕೈಗಾರಿಕೆ ಮತ್ತು ಕರಕುಶಲ ಕಲೆಗಳ ಅಧ್ಯಯನವನ್ನು ಮೈಸೂರು ರಾಜ್ಯದ ಭೌಗೋಳಿಕ ಚೌಕಟ್ಟಿನೊಳಗೆ ನಡೆಸಿದ್ದಾರೆ. ಅವರು ಆರಿಸಿಕೊಂಡಿರುವ ಕಾಲಾವಧಿ ಕ್ರಿ.ಶ. 1800ರಿಂದ 1881ರವರೆಗೆ ಮೈಸೂರು ರಾಜ್ಯದ ಇತಿಹಾಸದಲ್ಲಿ ಒಂದು ವಿಶಿಷ್ಟ ಘಟ್ಟವಾಗಿದೆ. ಈ ಅವಧಿಯಲ್ಲಿ ಮೈಸೂರು ಒಡೆಯರ ರಾಜ್ಯ ಆಧುನಿಕ ಪೂರ್ವ ಸ್ಥಿತಿಯಿಂದ ಆಧುನಿಕತೆಯತ್ತ ಹೊರಳುತ್ತಿತ್ತು. ಟಿಪ್ಪುಸುಲ್ತಾನರ ಮರಣಾನಂತರ ಬ್ರಿಟಿಷರು ಮೈಸೂರು ರಾಜ್ಯವನ್ನು ಮರಳಿ ಒಡೆಯರ ವಂಶಕ್ಕೆ ಒಪ್ಪಿಸಿದಾಗ ಮೂರನೇ ಕೃಷ್ಣರಾಜ ಒಡೆಯರು ಅಧಿಕಾರವನ್ನು ಪಡೆದುಕೊಂಡರು. ಆದರೆ 1831ರಲ್ಲಿ ನಗರದ ದಂಗೆಯ ಪರಿಣಾಮವಾಗಿ ಆಡಳಿತ ಸೂತ್ರವನ್ನು ಬ್ರಿಟಿಷರಿಗೆ ಒಪ್ಪಿಸಬೇಕಾಯಿತು. ಕ್ರಿ. ಶ. 1831ರಿಂದ 1881ರವರೆಗೆ ಬ್ರಿಟಿಷರ ನೇರ ಆಡಳಿತ ಮೈಸೂರು ರಾಜ್ಯದಲ್ಲಿ ನೆಲೆಸಿತ್ತು. ಈ ಅವಧಿಯಲ್ಲಿ ಬ್ರಿಟಿಷ್ ವಸಾಹತು ನೀತಿಯ ಧೋರಣೆ ಎಲ್ಲಾ ರಂಗಗಳಲ್ಲೂ ಕಾಣಿಸಿಕೊಂಡಿತು. ಕೈಗಾರಿಕೆ ಮತ್ತು ಕರಕುಶಲತೆಯ ಬೀಡಾಗಿದ್ದ ಮೈಸೂರು ಬ್ರಿಟಿಷರ ಸಂಪತ್ತಿನ ಮೂಲವಾಯಿತು. ಇಂತಹ ಕಾಲದಲ್ಲಿ ಕೈಗಾರಿಕೆ ಮತ್ತು ಕರಕುಶಲ ಕಲೆಗಳು ಹೇಗೆ ಬದುಕಿ ಉಳಿದಿದ್ದವು ಎಂಬುದರ ಇತಿಹಾಸವನ್ನು ಡಾ| ಡಿ. ಸಿ. ರಾಜಪ್ಪನವರು ದಾಖಲಿಸಲು ಯತ್ನಿಸಿದ್ದಾರೆ” ಎಂದು ಹೇಳಿದ್ದಾರೆ.