‘ವಿಮರ್ಶೆಯ ಮೂರು ಮುಖಗಳು’ ಲೇಖಕ ಡಾ.ಬಸವರಾಜ ಸಬರದ ಅವರ ಕೃತಿ. ಈ ಕೃತಿಗೆ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಡಾ. ಬಸವರಾಜ ಸಬರದ ಅವರು ವಚನ ಸಾಹಿತ್ಯದಲ್ಲಿ ಗಮನಾರ್ಹ ಅಧ್ಯಯನ ಮಾಡಿದವರು. ವಿಮರ್ಶೆಯ ಮೂರು ಮುಖಗಳು ಕುರಿತು ಗಂಭೀರ ಅಧ್ಯಯನ ಮಾಡಿದ್ದಾರೆ. ಅದರ ಫಲವಾಗಿ ಹುಟ್ಟಿದ ಮೂರು ಕಿರು ಕೃತಿಗಳನ್ನು ಒಂದೆಡೆ ಸಂಕಲಿಸಿ ಅವುಗಳಿಗೊಂದು ಸಮಗ್ರತೆಯನ್ನು ನೀಡಿದ್ದಾರೆ ಎಂದಿದ್ದಾರೆ ಡಾ. ಮೀರಾಸಾಬಿಹಳ್ಳಿ ಶಿವಣ್ಣ. ಮೊದಲ ಹಂತದಲ್ಲಿ- ವಿಮರ್ಶೆ ಎನ್ನುವುದು ಕತ್ತಿಯ ಮೇಲಿನ ನಡಿಗೆಯಾಗಿದೆ. ಸ್ವಲ್ಪ ಆಯತಪ್ಪಿದರೂ ವಿಮರ್ಶಕನನ್ನೇ ಬಲಿ ತೆಗೆದುಕೊಳ್ಳುತ್ತದೆ. ವಿಮರ್ಶಕನಾಗಬೇಕೆಂದು ಬಯಸುವವನು ಅದರ ಮೂಲಭೂತ ತತ್ವಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಅವನ್ನು ಸೂಕ್ತ ಸಂದರ್ಭದಲ್ಲಿ ಬಳಕೆ ಮಾಡಿಕೊಂಡಿರಬೇಕು. ಕೃತಿಯ ಸ್ವಾರಸ್ಯವನ್ನು, ಅದರೊಳಗಿರುವ ಸೂಕ್ಷ್ಮಗಳನ್ನು, ಧ್ವನಿಗಳನ್ನು ಗ್ರಹಿಸಿ ಅವನ್ನು ಸಹೃದಯರಿಗೆ ಉಣಬಡಿಸಬೇಕು. ತನಗಾದ ರಸಾನುಭವವನ್ನು,ಅದರ ಸೊಗಸನ್ನು ಅನಾವರಣ ಮಾಡಲು ವಿಮರ್ಶೆಯಲ್ಲಿ ಅನೇಕ ಮಾರ್ಗಗಳಿವೆ. ಕಾವ್ಯಾರ್ಥ ಚಿಂತನವನ್ನು ವಿಮರ್ಶೆಯ ಬೇರೆ ಬೇರೆ ಮಾನದಂಡಗಳನ್ನು ಬಳಸಿ ಕೃತಿಯ ಅಂತರಂಗದ ದರ್ಶನ ಮಾಡಿಸಬೇಕು. ವಿಮರ್ಶೆಯ ಇಂಥ ಎಲ್ಲ ಪರಿಕರಗಳನ್ನು, ವೈವಿಧ್ಯಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಎರಡನೆ ಹಂತದಲ್ಲಿ- ಈ ವಿಮರ್ಶೆ ತತ್ವಗಳನ್ನು ಅನ್ವಯಿಸಿ ಕನ್ನಡ ಸಾಹಿತ್ಯವನ್ನು ವಿವೇಚಿಸಿದ್ದಾರೆ. ಕನ್ನಡ ಸಾಹಿತ್ಯ ವಿಮರ್ಶೆಯ ಪರಂಪರೆ ಮತ್ತು ಪ್ರಯೋಗಗಳನ್ನು ಕುರಿತು ಚರ್ಚಿಸುತ್ತಾ, ಕನ್ನಡ ಸಾಹಿತ್ಯದ ಹರಿವಿಗೆ ಅನುಗುಣವಾಗಿ ರೂಪುಗೊಂಡ ನವೋದಯ, ನವ್ಯ, ದಲಿತ-ಬಂಡಾಯ ಮತ್ತು ಸ್ತ್ರೀವಾದಿ ವಿಮರ್ಶೆಗಳ ವಿವಿಧ ಕಾಲಘಟ್ಟಗಳನ್ನು ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಮೂರನೆ ಹಂತದಲ್ಲಿ- ಜನಪದ ಸಾಹಿತ್ಯವನ್ನು ಮಹಿಳಾನೆಲೆಯ ಮೂಲಕ ವಿಮರ್ಶಿಸುವ ಪ್ರಯತ್ನದಲ್ಲಿ ಹೊಸತನವಿದೆ. ರಾಮಾಯಣ-ಮಹಾಭಾರತ, ಜನಪದ ದೇವತೆಗಳು ಮತ್ತು ಬುಡಕಟ್ಟುಗಳ ಅಧ್ಯಯನವನ್ನು ಮಹಿಳಾ ದೃಷ್ಟಿಕೋನದ ಮೂಲಕ ವಿವೇಚಿಸುವ ಪ್ರಯತ್ನ ಮಾಡಿದ್ದಾರೆ. ಒಟ್ಟಾರೆ ಸಬರದ ಅವರು ತಮ್ಮ ಅನೇಕ ವರ್ಷಗಳ ಅಧ್ಯಯನದಿಂದ ಈ ಕೃತಿಯನ್ನು ರೂಪಿಸಿದ್ದು, ವಿಮರ್ಶಾ ಕ್ಷೇತ್ರಕ್ಕೆ ಒಂದು ಹೊಸ ಸೇರ್ಪಡೆಯಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ ಡಾ.ಮೀರಾಸಾಬಿಹಳ್ಳಿ ಶಿವಣ್ಣ.
©2024 Book Brahma Private Limited.