ಭಾರತ ಒಂದು ಮರು ಶೋಧನೆ

Author : ರವಿ ಹಂಜ್

Pages 224

₹ 180.00




Year of Publication: 2019
Published by: ಶ್ರೀರಾಜೇಂದ್ರ ಪ್ರಿಂಟರ್ಸ್
Address: 12/1, ಇವನಿಂಗ್ ಬಜಾರ್ ಹಿಂಭಾಗ, ಶಿವರಾಂ ಪೇಟೆ,  ಮೈಸೂರು - 570001

Synopsys

 ಸಾಹಿತಿ ರವಿ ಹಂಜ್ ಅವರು ರಚಿಸಿರುವ ಇತಿಹಾಸದ ಕೃತಿ ‘ಭಾರತ: ಒಂದು ಮರು ಶೋಧನೆ’

ಈ ಕೃತಿಯಲ್ಲಿ ಸಮಾಜ ರಚನೆ, ಧರ್ಮೋದಯ, ಧಾರ್ಮಿಕ ಹೆಚ್ಚುಗಾರಿಕೆಯ ವಾಗ್ವಾದದ ಚಿತ್ರಣವಿದೆ. ವಿದೇಶಿ ದಾಳಿಗಳು ಹೇಗೆ ಒಂದು ದೇಶವನ್ನು ಮತ್ತು ಸಂಸ್ಕೃತಿಯನ್ನು ಅರಿಯದೆ ಉದ್ದೇಶರಹಿತವಾಗಿ ಪಲ್ಲಟಗೊಳಿಸುತ್ತವೆ ಎಂಬ ವಾಸ್ತವದ ಅನಾವರಣವನ್ನು ಈ ಕೃತಿ ಬಿತ್ತರಿಸುತ್ತದೆ. ಭಾರತ ಮರುಶೋಧನೆ ಕೃತಿಯಲ್ಲಿ ಒಟ್ಟು ಹತ್ತು ಪರ್ವಗಳಿದ್ದು, ಮೂವತ್ತೆರಡು ಅಧ್ಯಾಯಗಳಿವೆ. ಸಿಂಧೂ ನಾಗರೀಕತೆಯ ವಿಕಾಸ ಪರ್ವದಿಂದ ಆರಂಭಗೊಂಡು ಸ್ವತಂತ್ರ ಭಾರತ ಪರ್ವದವರೆಗೆ ಕಳೆದ ಐದು ಸಾವಿರ ವರ್ಷಗಳ ಇತಿಹಾಸವನ್ನು ಅವಲೋಕಿಸುತ್ತಾ ವಿಶ್ಲೇಷಣೆಗೆ ಒಳಪಡಿಸಿ, ವರ್ತಮಾನದ ಭಾರತ ಸಾಗಿ ಬಂದ ಸುದೀರ್ಘ ಹಾದಿಯನ್ನು ತೋರುವ ಪ್ರಯತ್ನವಾಗಿ ಈ ಪುಸ್ತಕ ಹೊರಬಂದಿದೆ. ಇತಿಹಾಸದಿಂದ-ವರ್ತಮಾನದವರೆಗಿನ ಅಪರೂಪದ ಸಂಗತಿಗಳನ್ನು ಒಳಗೊಂಡಿರುವ ಪರಾಮರ್ಶನ ಗ್ರಂಥವೆಂದು ಹೇಳಬಹುದಾದ ಕೃತಿಯಾಗಿದೆ. 

 

About the Author

ರವಿ ಹಂಜ್

ಬರಹಗಾರ, ಮ್ಯಾನೇಜ್‌ಮೆಂಟ್ ತಜ್ಞ ರವಿ ಹಂಜ್ ಮೂಲತಃ ಮೈಸೂರಿನವರು. ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ಅಪ್ಲಿಕೇಷನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಹಾವರ್ಡ್‌ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್ ಮೆಂಟ್ ಎಸೆನ್ಶಿಯಲ್ ಕೋರ್ಸ್‌‌ ಹಾಗೂ ಚಿಕಾಗೋದ ಡೆಪೌಲ್ ವಿಶ್ವವಿದ್ಯಾಲಯದಲ್ಲಿ ವೆಬ್ ಕಾಮರ್ಸ್ ಕೋರ್ಸ್‌ ಪ್ರಮಾಣ ಪತ್ರ ಪಡೆದದ್ದಾರೆ.  ಪ್ರಸ್ತುತ ಮ್ಯಾನೇಜ್‌ಮೆಂಟ್ ತಜ್ಞರಾಗಿ ಚಿಕಾಗೋದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಇವರ ನೆಚ್ಚಿನ ಹವ್ಯಾಸಗಳಲ್ಲಿ ಬರವಣಿಗೆ ಕೂಡ ಒಂದು. ಪೂರ್ಣ ಚಂದ್ರ ತೇಜಸ್ವಿ ಅವರಿಂದ ಸ್ಫೂರ್ತಿ ಪಡೆದಿರುವ ಇವರು ಕನ್ನಡದ ದಿನಪತ್ರಿಕೆಗಳಿಗೆ ಲೇಖನ, ಅಂಕಣಗಳನ್ನು ಬರೆದಿದ್ದಾರೆ.  ಹುಯನ್ ತ್ಸಾಂಗ್‌ನ ಮಹಾಪಯಣ, ಭಾರತ ಒಂದು ಮರುಶೋಧನೆ ಇವರ ಪ್ರಮುಖ ಕೃತಿಗಳು. ...

READ MORE

Excerpt / E-Books

ಮುನ್ನುಡಿ

‘ಭಾರತ-ಒಂದು ಮರು ಶೋಧನೆ’ ಎಂಬ ಪುಸ್ತಕಕ್ಕೆ ಮುನ್ನುಡಿಯನ್ನು ಬರೆಯುವ ಗೌರವವನ್ನು ಶ್ರೀ ರವಿ ಹಂಜ್ ಅವರು, ಖ್ಯಾತ ಪ್ರಕಾಶಕರಾದ ಶ್ರೀ ಲೋಕಪ್ಪನವರ ಮೂಲಕ ನನಗೆ ಒದಗಿಸಿಕೊಟ್ಟಿದ್ದಾರೆ. ಆದುದರಿಂದ ಈ ಇಬ್ಬರು ಮಹನೀಯರಿಗೆ ನನ್ನ ಕೃತಜ್ಞತೆಯನ್ನು ತಿಳಿಸಬಯಸುತ್ತೇನೆ.

ಭಾರತ-ಒಂದು ಮರುಶೋಧನೆ ಗ್ರಂಥದಲ್ಲಿ ಒಟ್ಟು ಹತ್ತು ಪರ್ವಗಳಿದ್ದು ಮೂವತ್ತೆರಡು ಅಧ್ಯಾಯಗಳಿವೆ.  ಸಿಂಧೂ ಕೊಳ್ಳದ ನಾಗರಿಕತೆಯ ವಿಕಾಸಪರ್ವದಿಂದ ಆರಂಭಗೊಂಡು ಸ್ವತಂತ್ರ ಭಾರತ ಪರ್ವದವರೆಗೆ ಕಳೆದ ಐದು ಸಾವಿರ ವರ್ಷಗಳ ಇತಿಹಾಸವನ್ನು ಅವಲೋಕಿಸುತ್ತ ವಿಶ್ಲೇಷಣೆಗೆ ಒಳಪಡಿಸಿ, ವರ್ತಮಾನದ ಭಾರತ ಸಾಗಿ ಬಂದ ಸುಧೀರ್ಘ ಹಾದಿಯನ್ನು ತೋರುವ ಒಂದು ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

"ಗ್ರೀಕ್ ಮತ್ತು ರೋಮನ್ ಇತಿಹಾಸಕಾರರು, ಭಾರತಕ್ಕೆ ಪ್ರಾಚೀನವಾದ ಇತಿಹಾಸವೇ ಇಲ್ಲ; ಅದರ ಇತಿಹಾಸ ಪ್ರಾರಂಭವಾಗುವುದು ವೇದಯುಗದ ಕಾಲದಿಂದ. ಅದೂ ಮೌಖಿಕವಾದ ಇತಿಹಾಸ ಎಂದು ನಮ್ಮನ್ನು ಕೀಳಾಗಿ ಕಾಣುತ್ತಿದ್ದರು. ಇದಕ್ಕೆ ಸವಾಲು ಎಂಬಂತೆ ಸಿಂಧೂ ಕೊಳ್ಳದ ನಾಗರಿಕತೆಯನ್ನು ಉತ್ಖನನದ ಮೂಲಕ ಪತ್ತೆ ಹಚ್ಚಲಾಯಿತು. ಇದರಿಂದ ನಮ್ಮ ಸಂಸ್ಕೃತಿಯ ಕಾಲ ಸುಮಾರು ಕ್ರಿಸ್ತಪೂರ್ವ ನಾಲ್ಕನೆಯ ಸಹಸ್ರಮಾನಕ್ಕೆ ಕೊಂಡೊಯ್ಯಲ್ಪಟ್ಟು, ಇದ್ದಕ್ಕಿದ್ದಂತೆ ನಮ್ಮ ಗೌರವ ಭಾರತೀಯ ಮತ್ತು ವಿದೇಶೀಯ ಇತಿಹಾಸಕಾರರಲ್ಲಿ ಹೆಚ್ಚಿತು. ಸಿಂಧೂ ನಾಗರಿಕತೆಯಲ್ಲಿ ದೊರಕಿರುವ ಒಬ್ಬಳು ನರ್ತಕಿಯ ವಿಗ್ರಹ ಇಡೀ ಪ್ರಪಂಚದ ಮೊಟ್ಟಮೊದಲನೆಯ ನರ್ತಕಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದು ಭರತನ ನಾಟ್ಯಶಾಸ್ತ್ರಕ್ಕೂ ಹಿಂದಿನದು ಎಂಬುದನ್ನು ನೆನೆಸಿಕೊಂಡಾಗ ಮೈನವಿರೇಳುತ್ತದೆ. ಇದೇ ಸಂಸ್ಕೃತಿಯಲ್ಲಿ ದೊರಕಿದ ಮುದ್ರೆಗಳ ಮೇಲಿನ ಬರವಣಿಗೆ ಇನ್ನೂ ಯಾರಿಂದಲೂ ಓದಲು ಆಗಿಲ್ಲ. ಆ ಪುಣ್ಯ ಯಾರಿಗಿದೆಯೋ ಆ ದೇವರೇ ಬಲ್ಲ!"  ಇದು ಇತಿಹಾಸಜ್ಞರು ಕಂಡುಕೊಂಡುದಾದರೆ, ರವಿ ಹಂಜ್ ಆ ಉತ್ಖನನಗಳ ಹಿನ್ನೆಲೆಯಲ್ಲಿ ಅಂದಿನ ಸಾಮಾಜಿಕ ಜನಜೀವನವನ್ನು ವಿವರಿಸುತ್ತ ಅಂದಿನ ವ್ಯವಸ್ಥೆ ಹೇಗೆ ಮೈಕ್ರೋ-ಕ್ಯಾಪಿಟಲ್ ವ್ಯವಸ್ಥೆಯಾಗಿದ್ದಿತು, ಹೇಗೆ ಅಲ್ಲಿ ಸಮಾನತೆಯಿದ್ದಿತು, ಮತ್ತು ಆ ಸಂಸ್ಕೃತಿ ಹೇಗೆ ಧರ್ಮರಹಿತವಾಗಿದ್ದಿತು ಎಂಬ ಹೊಸ ಚಿಂತನೆಯನ್ನಿಡುತ್ತಾರೆ.  ಈ ರೀತಿಯಾಗಿ ಇತಿಹಾಸದ ಪ್ರತಿಯೊಂದು ಪರ್ವದಲ್ಲಿ ಐತಿಹಾಸಿಕ ವಿಶ್ಲೇಷಣೆಯ ಹೊಸನೋಟಗಳನ್ನು ತೆರೆದಿಡುವುದಲ್ಲದೇ ಅದಕ್ಕೇ ಪೂರಕ ಮಾಹಿತಿಯನ್ನೂ ಒದಗಿಸುತ್ತಾರೆ. 

ರವಿಯವರ ಈ ಕೃತಿಯಾದ್ಯಂತ ಎದ್ದು ಕಾಣುವುದು ಓರ್ವ ಶೈಕ್ಷಣಿಕೇತರ ವ್ಯಕ್ತಿ ಇತಿಹಾಸವನ್ನು ಕೇವಲ ಕುತೂಹಲಿಯಾಗಿ ಸಂಶೋಧಿಸುತ್ತಾ ವಿಶ್ಲೇಷಿಸಿದರೆ ಅದು ಹೇಗೆ ಒಂದು ಹೊಚ್ಚ ಹೊಸನೋಟ ಸಿಗಬಹುದು ಎಂಬುದು. ರವಿಯವರು ತಮ್ಮ ಪ್ರಸ್ತಾವನೆಯಲ್ಲಿ ’ಸಾಕಷ್ಟು ಶೈಕ್ಷಣಿಕ ಐತಿಹಾಸಿಕ ಸಂಶೋಧನೆಗಳು ಯಾವುದೋ ಪ್ರಭಾವಕ್ಕೆ ಒಳಗಾಗಿರುವಂತಿವೆ’ ಎನ್ನುತ್ತಾರೆ. ಇದಕ್ಕೆ ಪ್ರಮುಖ ಕಾರಣ, ಇಂತಹ ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಮತ್ತು ಜನಜೀವನಗಳನ್ನು ಒಟ್ಟಾಗಿ ಸಮೀಕರಿಸಿ ವಿಶ್ಲೇಷಿಸುವ ಅವಕಾಶಗಳು ಶೈಕ್ಷಣಿಕ ಕ್ಷೇತ್ರದ ವಿಭಾಗ ವಿಂಗಡನೆಗಳ ನಿಯಮಿತ ಪರಿಧಿಯಲ್ಲಿ ಸೀಮಿತಗೊಳ್ಳುವುದರಿಂದ ಈ ರೀತಿಯ ವಿಶ್ಲೇಷಣೆ ಸಾಧ್ಯವಾಗಿಲ್ಲವೆನಿಸುತ್ತದೆ. ಹಾಗಾಗಿ ಆ ಶೈಕ್ಷಣಿಕ ಸಂಶೋಧನೆಗಳಲ್ಲಿ ಅದೊಂದು ಕೊರತೆಯಾಗಿ ಕಾಣುತ್ತದೆ. ಅಂತಹ ಒಂದು ನಿರ್ವಾತವನ್ನು ತುಂಬಬಲ್ಲ ಮಹತ್ವದ ವಿಶ್ಲೇಷಣೆ ಈ ಗ್ರಂಥದಲ್ಲಿದೆ. ಆ ಮಟ್ಟಿಗೆ ಇದೊಂದು ಅಪರೂಪದ ಗ್ರಂಥ. 

ಓದುಗರಿಗೆ ಇದು ಪಂಡಿತ್ ನೆಹರೂ ಅವರ ’ದಿ ಡಿಸ್ಕವರಿ ಆಫ್ ಇಂಡಿಯಾ’ದ ಛಾಯೆಯಂತೆ ಕಂಡರೂ, ಇದು ಭಿನ್ನವಾಗಿದೆ. ನೆಹರೂರವರು ತಮ್ಮ ಕೃತಿಯಲ್ಲಿ ಚರಿತ್ರೆಯನ್ನು ತಿಳಿಸಿದರೆ, ಇಲ್ಲಿ ಆಳವಾದ ವಿಶ್ಲೇಷಣೆಯಿದ್ದು, ಇಂದಿನ ಪ್ರಸ್ತುತ ಭಾರತ ಹೇಗೆ ಇತಿಹಾಸದುದ್ದಕ್ಕೂ ರೂಪುಗೊಳ್ಳುತ್ತ ಸಾಗಿಬಂದಿತು ಎಂಬ ನಿರೂಪಣೆಗೆ ಬೇಕಾದ ಅಧ್ಯಯನ, ಶಿಸ್ತು, ಸಂಯಮ ಕೃತಿಯ ಉದ್ದಕ್ಕೂ ಕಾಣಸಿಗುತ್ತದೆ.

ಈ ಕೃತಿಯಲ್ಲಿ ಸಮಾಜ ರಚನೆ, ಧರ್ಮೋದಯ, ಧಾರ್ಮಿಕ ಹೆಚ್ಚುಗಾರಿಕೆಯ ವಾಗ್ವಾದದ ಚಿತ್ರಣವಿದೆ, ವಿದೇಶಿ ದಾಳಿಗಳು ಹೇಗೆ ಒಂದು ದೇಶವನ್ನು, ಸಂಸ್ಕೃತಿಯನ್ನು ಅರಿಯದೆ ಉದ್ದೇಶರಹಿತವಾಗಿ ಪಲ್ಲಟಗೊಳಿಸುತ್ತವೆ ಎಂಬ ವಾಸ್ತವದ ಅನಾವರಣವಿದೆ.  ಪ್ರಜಾಪ್ರಭುತ್ವ ರಚನೆಯಲ್ಲಿ ಧೀರ್ಘಾಲೋಚನೆಯ ಅರಿವಿರದಿದ್ದರೆ ಏನಾಗಬಹುದೆಂಬ ಕಟುಸತ್ಯದ ಅನಾವರಣ ಕೂಡಾ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿಯವರೆಗೆ ಗೋಜಲು ಗೋಜಲಾಗಿದ್ದ ಹುಟ್ಟಿನಿಂದ ಜಾತಿ, ಅಸ್ಪೃಶ್ಯತೆಯ ಸೃಷ್ಟಿಯ ಕುರಿತಾಗಿ ನಿಖರ ಮಾಹಿತಿಯಿದ್ದು ಇದುವರೆಗೂ ಬೆಳಕಿಗ ಬಾರದಿದ್ದ ಸಾಕಷ್ಟು ವಿಷಯಗಳ ಬಗ್ಗೆ ಸ್ಪಷ್ಟತೆ ಇದೆ. ಅದೆಲ್ಲಕ್ಕೂ ಪುರಾವೆಯಾಗಿ ಪುಸ್ತಕದ ಕೊನೆಯಲ್ಲಿ ಉತ್ತಮ ಆಕರಗಳ ಸೂಚಿಯಿದೆ. ಹೆಚ್ಚಿಗೆ ತಿಳಿಯಲು ಇಚ್ಛಿಸುವವರು ಇವುಗಳ ಅಧ್ಯಯನ ಮಾಡಬಹುದು. ಒಟ್ಟಿನಲ್ಲಿ ಇದೊಂದು ಇತಿಹಾಸದಿಂದ-ವರ್ತಮಾನದವರೆಗಿನ ಅಪರೂಪದ ಪರಾಮರ್ಶನ ಗ್ರಂಥ.

ಅಮೆರಿಕದ ಶಿಕಾಗೊದಲ್ಲಿರುವ ರವಿ ಹಂಜ್‌ರವರು ದೂರದ ಅಮೆರಿಕೆಯಲ್ಲಿದ್ದರೂ ನಮ್ಮ ದೇಶದ ಇತಿಹಾಸದ ಬಗ್ಗೆ ಆಸಕ್ತಿ ಹೊಂದಿರುವುದು ಮೆಚ್ಚಬೇಕಾದ ಅಂಶ.
ಇಂಥಹ ಒಂದು ಅತ್ಯುತ್ತಮ ಐತಿಹಾಸಿಕ ವಿಶ್ಲೇಷಣಾ ಗ್ರಂಥವನ್ನು ಪ್ರಕಟಿಸಿರುವ ಶ್ರೀ ರಾಜೇಂದ್ರ ಪ್ರಿಂಟರ‍್ಸ್ ಮತ್ತು ಪಬ್ಲಿಷರ‍್ಸ್‌ನ ಮಾಲೀಕರಾದ ಶ್ರೀ ಡಿ.ಎನ್. ಲೋಕಪ್ಪನವರು ಎಲ್ಲರ ಕೃತಜ್ಞತೆಗೆ ಪಾತ್ರರಾಗಿದ್ದಾರೆ.  ಇನ್ನೂ ಹೆಚ್ಚಿನ ಸೇವೆ ಇವರಿಂದ ನಾಡಿಗೆ ಉಂಟಾಗಲಿ ಎಂದು ಹಾರೈಸುತ್ತೇನೆ.
ಈ ಮುನ್ನುಡಿಯನ್ನು ಬರೆಯಲು ಅವಕಾಶ ಮಾಡಿಕೊಟ್ಟ ಶ್ರೀ ಡಿ.ಎನ್. ಲೋಕಪ್ಪನವರನ್ನು ಮತ್ತೊಮ್ಮೆ ವಂದಿಸುತ್ತೇನೆ.

-ಡಾ. ಎ.ವಿ. ನರಸಿಂಹಮೂರ್ತಿ

Related Books