‘ಜನ ಭಾಷೆ ಮತ್ತು ಪ್ರಭುತ್ವ ಭಾಷೆಗಳ ಸಂಘರ್ಷ’ ಲೇಖಕ ಡಾ. ರಂಗನಾಥ ಕಂಟನಕುಂಟೆ ಅವರ ಸಂಶೋಧನಾತ್ಮಕ ಕೃತಿ. ಈ ಕೃತಿಗೆ ಕಿ.ರಂ. ನಾಗರಾಜ ಅವರ ಬೆನ್ನುಡಿಯ ಮಾತುಗಳಿವೆ. ಕೃತಿಯ ಕುರಿತು ಬರೆಯುತ್ತಾ ಸಾಮಾಜಿಕ ಭಾಷಾಶಾಸ್ತ್ರ, ಮನೋವಿಶ್ಲೇಷಣಾತ್ಮಕ ಭಾಷಾಶಾಸ್ತ್ರ, ಭಾಷಾಶಾಸ್ತ್ರದ ವ್ಯಾವಹಾರಿಕ ಪರಿಪ್ರೇಕ್ಷ್ಯ ಇವುಗಳನ್ನು ಪರಿಶೀಲಿಸಿ ಭಾಷೆಯ ಸಂಬಂಧವಾಗಿ ಏರ್ಪಡುವ ಪಾಶ್ಚಾತ್ಯ ಅಹಂಕಾರ ಹಾಗೂ ಪೌರ್ವಾತ್ಯರ ಕೀಳಿರಿಮೆಯ ಪ್ರಶ್ನೆಗಳನ್ನು ಇಲ್ಲಿ ವಿವೇಚಿಸಿದ್ದಾರೆ. ಭಾಷೆಗೂ ಮಾರುಕಟ್ಟೆಗೂ ಇರುವ ಸಂಬಂಧಗಳು, ಬಹುತ್ವದ ಭಾಷಾ ಕಲ್ಪನೆಗೂ ಏಕಾಕೃತಿಯ ಒತ್ತಡಕ್ಕೂ ಮಧ್ಯೆ ಹುಟ್ಟಿರುವ ಘರ್ಷಣೆಗಳನ್ನು ಈ ಕೃತಿ ವಿವೇಚಿಸುತ್ತದೆ ಎಂದಿದ್ದಾರೆ. ಜೊತೆಗೆ ಹೇರಿಕೆಯ ಭಾಷೆಯಾಗಿ ಇಂಗ್ಲಿಶ್, ಬೇಡಿಕೆಯ ಭಾಷೆಯಾಗಿ ಇಂಗ್ಲಿಶ್ ಸರ್ಕಾರಿ ಪ್ರಣೀತವಾದ ಇಂಗ್ಲಿಶ್ ಇಂತಹ ಮುಖ್ಯ ಪ್ರಶ್ನೆಗಳು ಇಲ್ಲಿ ಚರ್ಚಿತವಾಗಿವೆ. ಜಾಗತೀಕರಣದ ಇಂದಿನ ದಿನಗಳಲ್ಲಿ ಭಾಷೆ ನಿರ್ವಹಿಸುತ್ತಿರುವ ಅಸಮಾನತೆಯನ್ನು ಈ ಕೃತಿ ವಿಶ್ಲೇಷಿಸುತ್ತದೆ ಎಂದು ಕೀರಂ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಭಾಷೆ, ಸಂಸ್ಕೃತಿ, ರಾಜಕಾರಣ, ಆಕ್ರಮಣಶೀಲತೆ ಮುಂತಾದ ಆಯಾಮಗಳನ್ನು ಸಂಸ್ಕೃತಿಯ ಕೇಂದ್ರ ಪ್ರಶ್ನೆಯಾಗಿಸಿಕೊಂಡಿರುವುದೇ ಇದರ ಮುಖ್ಯ ನೆಲೆ, ಇಂತಹ ಕೃತಿಗಳು ಸಮುದಾಯದ ಸಾಂಸ್ಕೃತಿಕ ಅನನ್ಯತೆಯನ್ನು ಚರ್ಚಿಸುವ ದೃಷ್ಟಿಯಿಂದ ಮಹತ್ವದ ಚರ್ಚೆಗಳನ್ನು ಎಬ್ಬಿಸಬಲ್ಲವು ಎಂದಿದ್ದಾರೆ.
©2024 Book Brahma Private Limited.