ಕುವೆಂಪು ಕಾವ್ಯದ ವಿಭಿನ್ನ ನೆಲೆಗಳು

Author : ಡಾ. ಸಿದ್ದಯ್ಯ ಆರ್‌.ಎಸ್

Pages 420

₹ 1596.00




Year of Publication: 2024
Published by: Helmand Books, New Delhi.
Address: Helmand Books Office No 3, 1st Floor, Pocket - H34, SEC-3, Rohini, Delhi, 110085, India.
Phone: 18001234070

Synopsys

ಸಿದ್ದಯ್ಯ ಆರ್.ಎಸ್ ಅವರು ಬರೆದಿರುವ “ಕುವೆಂಪು ಕಾವ್ಯದ ವಿಭಿನ್ನ ನೆಲೆಗಳು” ಎಂಬ ಈ ಸಂಶೋಧನಾ ಕೃತಿಯು ತುಂಬಾ ವೈಶಿಷ್ಟ್ಯಪೂರ್ಣವಾಗಿ ಅಧ್ಯಯನಕ್ಕೆ ಒಳಪಟ್ಟಿದೆ. ಕುವೆಂಪು ಅವರ ಕಾವ್ಯದ ಮೇಲೆ ನಡೆದಿರುವ ಇದುವರೆಗಿನ ಚಿಂತನೆಗಳು ಒಂದು ನೆಲೆಯಾದರೆ, ಇಲ್ಲಿನ ಅಧ್ಯಯನವು ಮತ್ತೊಂದು ನೆಲೆಯಲ್ಲಿ ನಿಲ್ಲುತ್ತದೆ. ಇಲ್ಲಿ ಕುವೆಂಪು ಚಿಂತನೆಗಳನ್ನು ಮರುಪರಿಶೀಲಿಸಿ, ಹೊಸ ಚಿಂತನೆಯ ನವಮಾರ್ಗವನ್ನು ಕಂಡುಕೊಳ್ಳಲಾಗಿದೆ. ಈ ಸಂಶೋಧನೆಯು ಸಮಕಾಲೀನತೆಗೆ ಸ್ಪಂದಿಸಿರುವ ರೀತಿಯೇ ವಿಶಿಷ್ಟವಾದುದು. ನಮ್ಮ ದೇಶದ ಜಾತಿಪದ್ಧತಿ, ಮೂಢನಂಬಿಕೆ, ಸಾಮಾಜಿಕ ಅಸಮಾನತೆ ಹಾಗೂ ಪುರೋಹಿತಶಾಹಿ ಪ್ರವೃತ್ತಿಗಳನ್ನು ಅತ್ಯಂತ ದಿಟ್ಟತನದಿಂದ ಸಮರ್ಥವಾಗಿ ಯಾವುದೇ ಒಡಂಬಡಿಕೆಗಳಿಲ್ಲದೆ ಪ್ರಶ್ನಿಸಿ, ವೈಚಾರಿಕ ಚಿಕಿತ್ಸೆಗೆ ಒಳಪಡಿಸಿರುವ ಕುವೆಂಪುರವರ ಕಾವ್ಯವನ್ನು ವೈಜ್ಞಾನಿಕ ಮನೋಧರ್ಮದಲ್ಲಿ ಅಧ್ಯಯನವನ್ನು ಮಾಡಲಾಗಿದೆ. ಕುವೆಂಪು ಅವರ ಆಶಯದಂತೆ ಅವರ ಕಾವ್ಯದ ಚಿಂತನಾAಶ ಮತ್ತು ಭಾವನಾಂಶ ಹಾಗೂ ಕಾವ್ಯಾಂಶಗಳನ್ನು ಕುರಿತ ಅಧ್ಯಯನ ಈ ಸಂಶೋಧನಾ ಮಹಾಪ್ರಬಂಧದ ವಿಶೇಷ. ಕುವೆಂಪು ಅವರ ಸಾಹಿತ್ಯದ ಮೇಲೆ ಅಂಬೇಡ್ಕರ್‌ರವರ ಚಿಂತನೆಯ ಪ್ರತ್ಯಕ್ಷ ಪ್ರಭಾವವಿದೆ ಎಂಬುದನ್ನು ಸಾಧಿಸಿ ತೋರಿಸಿರುವುದರಲ್ಲಿ ಈ ಸಂಶೋಧನಾ ಕೃತಿಯ ಮಹತ್ವವಿದೆ. ‘ಬಹುತ್ವದಲ್ಲಿ ಏಕತೆ’ಯನ್ನು ಉಸಿರಾಡುತ್ತಿರುವ ಭಾರತೀಯರಿಗೆ ಈ ಕೃತಿ ಅಧ್ಯಯನ ಯೋಗ್ಯವಾಗಿದೆ.

Excerpt / E-Books

https://www.helmandbooks.com/book-details/1731055822-different-bases-of-kuvempu-poetry

Reviews

ಯಾವುದೇ ಮಾತೃ ಭಾಷೆ ಆ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ವಪೂರ್ಣವಾದ ಪಾತ್ರವನ್ನು ವಹಿಸುತ್ತದೆ. ಇಂತಹ ಭಾಷೆಯ ಕಡೆಗಣನೆ ಆ ತಲೆಮಾರಿನ ಸೃಜನಶೀಲತೆಯ ಕತ್ತನ್ನು ಇಸುಕಿದಂತಾಗುತ್ತದೆ. ಅನ್ನದ ಕಾರಣದಿಂದಲೊ, ಆಡಳಿತಶಾಹಿ ವರ್ಗದ ನಿರ್ಲಕ್ಷದಿಂದಲೊ ಆ ಭಾಷೆ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿರುವಾಗ ಅದಕ್ಕೆ ಪುನರ್‌ಮೌಲ್ಯವನ್ನು ಕಲ್ಪಿಸಿಕೊಡುವುದು ಆರೋಗ್ಯವಂತ ಸಮಾಜದ ಲಕ್ಷಣ. ತನ್ನ ನಾಡು-ನುಡಿ ಅಪಾಯದ ಅಂಚಿನಲ್ಲಿದ್ದಾಗ ಕೈಹಿಡಿದು ರಕ್ಷಿಸುವುದು ಯಾವುದೇ ಸೃಜನಶೀಲ ವ್ಯಕ್ತಿಯ ಜವಬ್ದಾರಿ. ಈ ಕರ್ತವ್ಯವನ್ನು ಕುವೆಂಪು ಹೇಗೆ ಸಾಕಾರಗೊಳಿಸಿದ್ದಾರೆ ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.

ನಮ್ಮ ಸಾಂಸ್ಕೃತಿಕ ಇತಿಹಾಸವನ್ನು ಅಂಧಭಕ್ತರಂತೆ ಗ್ರಹಿಸದೆ, ಪೂರ್ವಗ್ರಹ ಪೀಡಿತರಾಗದೆ, ಘಟನೆಯ ಹಿನ್ನಲೆ, ಮುನ್ನೆಲೆಗಳನ್ನು ಅರಿತುಕೊಳ್ಳಬೇಕು. ನಮ್ಮ ಸಂಸ್ಕೃತಿಯನ್ನು ಪ್ರಗತಿಪರ ಕುಲುಮೆಗೆ ಕೊಟ್ಟು, ಸರ್ವರಿಗೂ ಏಳ್ಗೆಯನ್ನು ಬಯಸುವ ಆಚಾರ-ವಿಚಾರಗಳನ್ನು ಪಾಲಿಸುವುದರ ಮೂಲಕ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ಕಂಡುಕೊಳ್ಳಬಹುದು. ಸ್ವರ್ಗವು ಸತ್ತ ಮೇಲೆ ಸಿಗುವ ಸವಲತ್ತಾಗಿದೆ. ಒಳ್ಳೆಯದು ಮಾಡಿದರೆ ಇಂದ್ರಲೋಕದ ಸ್ವರ್ಗದ ಬಾಗಿಲು ತೆರೆಯುತ್ತದೆ. ಇಲ್ಲದ್ದಿದರೆ ಯಮಲೋಕದ ನರಕದಲ್ಲಿ ಚಿತ್ರಹಿಂಸೆಯನ್ನು ಅನುಭವಿಸಬೇಕು. ಇದರ ನಿವಾರಣೆಗೆ ಕಾಶಿಗೆ ಹೋಗಿ ಬನ್ನಿ, ಗಂಗಾ ನದಿಯಲ್ಲಿ ಮುಳುಗಿ, ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿ, ಬ್ರಾಹ್ಮಣರಿಗೆ ದಕ್ಷಿಣೆಯನ್ನು ನೀಡಿ, ವೇದಗಳನ್ನು ಓದಿ, ವೇದಗಳನ್ನು ಓದಿಕೊಂಡಿರುವ ಪಂಡಿತರ ಸೇವೆಯನ್ನು ಮಾಡಿ ಎಂದು ಹೇಳುತ್ತಾರೆ.

ಇಂತಹ ಕಟ್ಟುಕತೆಗಳನ್ನು ಹೇಳಿ, ದಾನ-ಧರ್ಮದ ಹೆಸರಿನಲ್ಲಿ ಬಡವರನ್ನು ಸುಲಿಗೆ ಮಾಡುವವರ ವಿರುದ್ಧ ಕುವೆಂಪು ಗುಡುಗುತ್ತಾರೆ. ಸ್ವರ್ಗ ಎಂಬುದು ನಾವು ಸತ್ತ ಮೇಲೆ ಸಿಗುವಂತಹದಲ್ಲ. ಪೂರ್ವಜನ್ಮದ ಪುಣ್ಯದ ಫಲವೂ ಅಲ್ಲ. ಅದು ಈ ಭೂಮಿಯ ಮೇಲೆಯೇ ಇದೆ. ಸಕಲ ಜೀವರಾಶಿಗಳ, ಪ್ರಕೃತಿಯ ಸೌಂದರ್ಯದಲ್ಲಿ ಇದೆ ಎನ್ನುತ್ತಾರೆ ಕುವೆಂಪು. ಇಡೀ ದೇಶದ ಬೆನ್ನೆಲುಬಾಗಿರುವ ರೈತರ ದುಡಿಮೆಯನ್ನು ಹಾಗೂ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಕೀಲಿ ಕೈಯಂತಿರುವ ಕೂಲಿ-ಕಾರ್ಮಿಕ ಸಾಮಾನ್ಯರ ದುಡಿಮೆಯನ್ನು ಕೇವಲವಾಗಿ ಕಾಣುತ್ತಿದ್ದ ಕಾಲದಲ್ಲಿ ಅವರಿಗೆ ಮೌಲ್ಯವನ್ನು ತಂದು ಕೊಟ್ಟ ಕೀರ್ತಿ ಕುವೆಂಪುರವರಿಗೆ ಸಲ್ಲುತ್ತದೆ. ಇಂದು ರೈತರು ಹಾಗೂ ಕಾರ್ಮಿಕರ ಬದುಕು ಹೆಚ್ಚೇನು ಬದಲಾವಣೆಯಾಗಿಲ್ಲ. ರೈತರು ಬೆಳೆದ ಫಸಲಿಗೆ ಕಾರ್ಪೊರೇಟ್‌ಗಳು ಬೆಲೆಯನ್ನು ನಿಗದಿ ಮಾಡುತ್ತಿದ್ದಾರೆ.

ರೈತರನ್ನು ಆಡಳಿತವರ್ಗದ ಮೂಲಕ ಬಂಡವಾಳಶಾಹಿಗಳು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ದೊಡ್ಡ ಖರೀದಿದಾರರಿಗೆ ಮಾರಾಟ ಮಾಡಿ ಲಾಭ ಗಳಿಸುವ ಅವಕಾಶವನ್ನು ಮಧ್ಯವರ್ತಿಗಳು ನಾಶಮಾಡುತ್ತಿದ್ದಾರೆ ಎಂಬ ಮೊದಲಾದ ಸಂಗತಿಗಳನ್ನು ಕುರಿತು ಈ ಸಂಶೋಧನಾ ಕೃತಿಯಲ್ಲಿ ಚರ್ಚಿಸಲಾಗಿದೆ.

Related Books