‘ಕರ್ನಾಟಕದ ವೀರಗಲ್ಲುಗಳು’ ಸಂಶೋಧಕ ಆರ್. ಶೇಷಶಾಸ್ತ್ರಿ ಅವರ ಕೃತಿ. ಹಿರಿಯ ಸಂಶೋಧಕ ದಿ. ಡಾ. ಎಂ. ಚಿದಾನಂದಮೂರ್ತಿ ಬೆನ್ನುಡಿ ಬರೆದಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ದೊರಕುವ ವೀರಗಲ್ಲುಗಳನ್ನು ಅತ್ಯಂತ ಶಾಸ್ತ್ರೀಯವಾಗಿ ಅಭ್ಯಸಿಸಿರುವ ಇಂತಹ ಪ್ರಯತ್ನ ಈ ಮೊದಲು ಕರ್ನಾಟಕದಲ್ಲಂತೂ ನಡೆದಿರಲಿಲ್ಲ ಎನ್ನುತ್ತಾರೆ ಚಿದಾನಂದ ಮೂರ್ತಿ.
ಶೇಷಶಾಸ್ತ್ರಿ ಕರ್ನಾಟಕದ ಮೂಲೆ ಮೂಲೆಗಳಿಗೆ ಹೋಗಿ ಇಲ್ಲಿಯವರೆಗೆ ಇತಿಹಾಸತಜ್ಞರಿಂದ ಅಲಕ್ಷ್ಯಕ್ಕೆ ಒಳಗಾಗಿದ್ದ ಶಾಸನವಿಲ್ಲದ, ಕೇವಲ ಶಿಲ್ಪವಿರುವ ವೀರಗಲ್ಲುಗಳೂ ಸೇರಿದಂತೆ ಸಾವಿರಾರು ವೀರುಗಲ್ಲುಗಳನ್ನು ಪರಾಮರ್ಶಿಸಿ, ಪ್ರಕಟವಾಗಿರುವ ಸಾವಿರಾರು ಶಾಸನಗಳ ಪಾಠಗಳನ್ನು ಪರಿಶೀಲಿಸಿ ಕರ್ನಾಟಕ ಸಂಸ್ಕೃತಿಯ ಮುಖ್ಯಭಾಗವಾದ ವೀರಜೀವನದ ಅಧ್ಯಯನಕ್ಕೆ ಒಂದು ಶ್ರೇಷ್ಟ ಕೊಡುಗೆ ಸಲ್ಲಿಸಿದ್ದಾರೆ.
ಬೀರಗೊಳ್, ರಣವೀಳ್ಯ, ವೀರಗಲ್ಲಿನ ಶಿಲ್ಪದಲ್ಲಿ ಇಬ್ಬರು ಮುಖಾಮುಖಿಯಾಗಿ ಹೋರಾಡುತ್ತಿದ್ದರೆ ಅವರಲ್ಲಿ ವೀರನನ್ನು ಗುರುತಿಸುವ ಬಗೆ ಹೀಗೆ ಎಷ್ಟೋ ಹೊಸ ವಿಷಯಗಳು ಇಲ್ಲಿವೆ. ವೀರಗಲ್ಲಿನ ಶಿಲ್ಪಗಳ ವಿಶ್ಲೇಷಣೆಯಂತೂ ಅತ್ಯಂತ ಮೌಲಿಕವಾದುದು. ಬೇರೆ ಬೇರೆ ಕಾಲದ ವೀರಗಲ್ಲುಗಳ ವೈಶಿಷ್ಟ್ಯಗಳನ್ನು ಗುರುತಿಸಿರುವುದೂ ಅಷ್ಟೇ ಮುಖ್ಯ. ಪ್ರಾಚೀನ ಕರ್ನಾಟಕದ ಬೇರೆ ಬೇರೆ ಅಧ್ಯಯನಗಳಿಗೆ ಎಡೆಮಾಡಿ ಕೊಡುವಂತಿವೆ. ಈ ಕೆಲಸದ ಹಿಂದೆ ಅಪಾರ ಶ್ರಮವಿದೆ. ಕರ್ನಾಟಕ ಸಂಸ್ಕೃತಿ, ಕನ್ನಡ ಸಾಹಿತ್ಯದ ಕ್ಷಾತ್ರದ ಹಿನ್ನೆಲೆಯನ್ನು ತಿಳಿಯಬಯಸುವವರಿಗೆ ಈ ಕೃತಿಯು ಉತ್ತಮ ಪರಾಮರ್ಶನ ಗ್ರಂಥವಾಗಿದೆ ಎಂದೂ ಸಂಶೋಧಕ ಎಂ. ಚಿದಾನಂದಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.