ರೂವಾರಿಗಳ ಜತೆ ಷ. ಶೆಟ್ಟರ್ ಪಯಣ ಉಪಶೀರ್ಷಿಕೆಯ ‘ಸ್ಥಪತಿ’ ಕೃತಿಯನ್ನು ಹಿರಿಯ ಲೇಖಕ ಶಾಂತಿನಾಥ ದಿಬ್ಬದ ಅವರು ಇಂಗ್ಲಿಷ್ ನಿಂದ ಕನ್ನಡೀಕರಿಸಿದ್ದಾರೆ. ಶಿಲ್ಪಿಗಳು ಮತ್ತು ಶಾಸನ ಲೆಕ್ಕಣಿಕರ ಮೇಲೆ ಅವರು ಇಂಗ್ಲಿಷಿನಲ್ಲಿ ಬರೆದ ಪ್ರಬಂಧಗಳನ್ನು ಅನುವಾದಿಸಲಾಗಿದೆ. ಪ್ರಸ್ತುತ ಸ್ಥಪತಿ ಹೊತ್ತಿಗೆಯಲ್ಲಿ ಮೂರು ಭಾಗಗಳಿವೆ . ಮೊದಲನೆಯ ವಿಭಾಗದಲ್ಲಿ ಭಾರತದ ಮುಖ್ಯ ಶಿಲ್ಪಿಗಳನ್ನು ಕುರಿತ ಲೇಖನಗಳಿವೆ. ಎರಡನೆಯ ಭಾಗದಲ್ಲಿ ಸುಮಾರು 7-8ನೆಯ ಶತಮಾನದಿಂದ 17-18ನೆಯ ಶತಮಾನದವರೆಗಿನ ಹದಿನಾಲ್ಕು ಸಾವಿರಕ್ಕೂ ಹೆಚ್ಚು ಮಾಸ್ತಿ, ವೀರಗಲ್ಲು ಮತ್ತು ನಿಷಿಧಿಗಳಲ್ಲಿರುವ ಶಾಸನಗಳನ್ನು ಅಭ್ಯಾಸಿಸಿ ಲೆಕ್ಕಣಿಕಾರರ ಬಗ್ಗೆ ಬರೆದ ಪ್ರಬಂಧಗಳಿವೆ. ಮೂರನೆಯ ಭಾಗದಲ್ಲಿ , ಹೊಯ್ಸಳ-ವಿಜಯನಗರ ಕಾಲದ ರಾಜಕೀಯ ಚರಿತ್ರೆ, ಶಿಲ್ಪಿಗಳ ಕಾರ್ಯವಿಧಾನ, ಶೈವ, ಜೈನ, ವೈಷ್ಣವ ದೇವಾಲಯ ಮುಂತಾದವನ್ನು ವಿವೇಚಿಸಿ ಅವುಗಳನ್ನು ರಚಿಸಿದ ಸ್ಥಪತಿಗಳ ಬಗ್ಗೆ ಬರೆದ ದೀರ್ಘ ಪ್ರಬಂಧಗಳಿವೆ. ಕೊನೆಯ ಭಾಗದಲ್ಲಿ ಕದಂಬರಿಂದ ಕುಷಾಣರವೆರೆಗೆ ಭಾರತದಲ್ಲಿದ್ದ ಶಿಲ್ಪಗಳ ಬಗೆಗೆ ಸಂಕ್ಷಿಪ್ತವಾಗಿ ವಿಶ್ಲೇಷಿಸಿದ್ದಾರೆ.
ಲೇಖಕ ಶಿವಾನಂದ ಕಣವಿ ಅವರು ಬೆನ್ನುಡಿ ಬರೆದು ‘ಹೆಸರಾಂತ ಇತಿಹಾಸಕಾರ ಪ್ರೊ. ಷಡಕ್ಷರ ಶೆಟ್ಟರ್ ಈಗಿಲ್ಲ. ಅವರು ಶಿಲ್ಪ, ವಿನ್ಯಾಸ, ಶಾಸನ, ವೀರಗಲ್ಲುಗಳ ಬಗ್ಗೆ ವಿದ್ವತ್ ಪೂರ್ಣ ಲೇಖನಗಳನ್ನು ಬರೆದರು. ಅವರಂತೆ ಸುಂದರ ಶಿಲ್ಪಗಳ ನಿರ್ಮಾಪಕರಾದ ಕಲಾಕಾರರು, ಶ್ರಮಜೀವಿ ಶಿಲ್ಪಿಗಳ ಬಗ್ಗೆ ವಿಸ್ತೃತ ಮತ್ತು ಆಳವಾದ ಸಂಶೋಧನೆ ಮಾಡಿದ ಇತಿಹಾಸತಜ್ಞರು ಇನ್ನೊಬ್ಬರು ದೊರಕುವುದಿಲ್ಲ.ಸಾಮಾನ್ಯವಾಗಿ ವೀರಗಲ್ಲು ಇತ್ಯಾದಿಗಳನ್ನು ಹಳ್ಳಿ ಹಳ್ಳಿಗಳಲ್ಲಿ ನೋಡಿದಾಗ ನಾವು ಇಂಥ ವೀರ ಯಾರ ಪರವಾಗಿ ಹೋರಾಡುತ್ತ ಯಾವ ಯುದ್ಧದಲ್ಲಿ ಮಡಿದ, ಆ ಯುದ್ಧದ ಕಾಲ ಮತ್ತು ಉದ್ದೇಶವೇನಾಗಿತ್ತು. ಎಂಬುದನ್ನು ವಿಚಾರಿಸುತ್ತೇವೆ ಆದರೆ ಪ್ರೊ. ಶೆಟ್ಟರ್ ನಮ್ಮ ಗಮನವನ್ನು ಮೊದಲ ಬಾರಿಗೆ ಈ ಶಾಸನವನ್ನು ಕಲ್ಲಿನಲ್ಲಿ ಕಟೆದವರಾರು, ಎಲ್ಲಿಯವರು ಇತ್ಯಾದಿ ಮಾಹಿತಿಗಳನ್ನು ಸಂಶೋಧಿಸಿ ಕೊಡುತ್ತಾರೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ಹೊಯ್ಸಳ-ವಿಜಯನಗರದ ದೇವಾಲಯಗಳ ಶಿಲ್ಪಗಳ ಬಗ್ಗೆ ಕೊಡುತ್ತಾರೆ. ಆ ಕಾಲದಲ್ಲಿ ನೂರಾರು ಶೈವ, ಜೈನ, ವೈಶ್ಣವ ದೇವಾಲಯಗಳ ರಚನೆ, ಜೀರ್ಣೋದ್ಧಾರ ನಡೆಯಿತು. ಅಂಥ ಬೆರಗಾಗುವ ಕೆಲಸ ಮಾಡಿದ ಶಿಲ್ಪಗಳ ಹೆಸರು, ಊರು, ವ್ಯವಸಾಯ ಅಥವಾ ಸಮುದಾಯ, ಪಡೆದ ಸಂಭಾವನೆ, ರಚಿಸಿದ ಇತರ ಗಣ್ಯ ಶಿಲ್ಪಗಳು ಇತ್ಯಾದಿ ವಿವರಗಳನ್ನು ಅಚ್ಚರಿ ಬರುವಂತೆ ಮಂಡಿಸಿ, ತೆರೆಮರೆಯ ಅಗಾಧ ಪ್ರತಿಭೆಯ ವಿಶ್ವಕರ್ಮರ ಪರಿಚಯ ಮಾಡಿಕೊಡುತ್ತಾರೆ. ಒಟ್ಟಾರೆ, ಗಹನವಾದ, ಅತಿಪರಿಶ್ರಮದ ಸಂಶೋಧನೆಯ ಫಲ ನಮಗೆಲ್ಲರಿಗೂ ಎಟುಕುವಂತೆ ಮಾಡುತ್ತಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.