ಅಮರೇಶ ಯತಗಲ್ ಅವರ ಲೇಖನಗಳ ಸಂಗ್ರಹ ಕೃತಿ ʻವಾಲ್ಮೀಕಿ ಸಮುದಾಯ ಮತ್ತು ಚರಿತ್ರೆʼ. ನಾಯಕ ಜನಾಂಗವನ್ನು ಕುರಿತು ಬರೆದ ಅನೇಕ ಸಂಶೋಧನಾತ್ಮಕ ಲೇಖನಗಳು ಪ್ರಸ್ತುತ ಪುಸ್ತಕದಲ್ಲಿವೆ. ಜನಾಂಗದ ಸಾಮಾಜಿಕ, ಸಾಂಸ್ಕೃತಿಕ ಅಂಶಗಳ ಪ್ರಸ್ತುತ ಪುಸ್ತಕ ಬೆಳಕು ಚೆಲ್ಲುತ್ತದೆ. ಪ್ರತಿಷ್ಠಿತ ರಾಜ ಮಹಾರಾಜರುಗಳ ವೈಭವದ ಚರಿತ್ರೆಯ ಕುರಿತಾಗಿ ಹೆಚ್ಚಿನವರು ಆಸಕ್ತಿ ತೋರಿದರೆ, ಇಲ್ಲಿ ಲೇಖಕರು ನಿರ್ಲಕ್ಷಿತ ಪಾಳ್ಯಗಾರರ ಚರಿತ್ರೆಗೆ ಹೊಸ ಆಯಾಮವನ್ನು ನೀಡಿದ್ದು ವಿಶೇಷ. ಇಲ್ಲಿರುವ ಎಲ್ಲ ಲೇಖನಗಳು ಸಾಂಸ್ಕೃತಿಕ ನೆಲೆಯಲ್ಲಿ ನೆಲೆಗೊಂಡಿದ್ದು ಆ ಮುಖೇನ ವಾಲ್ಮೀಕಿ ಸಮುದಾಯದ ಚರಿತ್ರೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ; ಸರಪುರದ ರಾಣಿ ಈರಮ್ಮ, ಕನಕಗಿರಿಯ ನಾಯಕ ಅರಸರು, ಕರಿಗುಡ್ಡದ ನಾಯಕ ಪಾಳೆಗಾರರು, ಕರ್ನಾಟಕ ನಾಯಕ ಪಾಳೆಗಾರರ ಚರಿತ್ರೆ ಅಧ್ಯಯನದ ಸಾಧ್ಯತೆ-ಸವಾಲು, ಸುರಪುರದ ನಾಲ್ವಡಿ ವೆಂಕಟಪ್ಪನಾಯಕನ ಅಂತ್ಯ, ಆನೆಗೊಂದಿ, ಪಾಳೆಯಗಾರರ ನ್ಯಾಯಾಡಳಿತ, ಸುರಪುರದ ಚಿತ್ರಕಲೆ, ಹರ್ತಿಕೋಟೆಯ ವಾಲ್ಮೀಕಿ ಸಾಹಿತ್ಯ ಸಂಪದ, ಕುಮ್ಮಡದುರ್ಗದ ಪ್ರಸ್ತುತ ಸ್ಥಿತಿಗತಿ ಮುಂತಾದ ಶೀರ್ಷಿಕೆಗಳ ಲೇಖನಗಳಿವೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರಾಗಿರುವ ಅಮರೇಶ ಯತಗಲ್ ಅವರು ರಾಯಚೂರು ಜಿಲ್ಲೆಯ ಯತಗಲ್ ನವರು. ಸುರಪುರ ಸಂಸ್ಥಾನದ ಬಗ್ಗೆ ಸಂಶೋಧನೆ ನಡೆಸಿರುವ ಅವರು ಇತಿಹಾಸ ಬರವಣಿಗೆಯಲ್ಲಿ ಆಸಕ್ತರಾಗಿದ್ದಾರೆ. ...
READ MORE