ಲೇಖಕ ಜಾಜಿ ದೇವೇಂದ್ರಪ್ಪ ಅವರ ಕೃತಿ ‘ತಿಳಿದಷ್ಟೇ ಬಯಲು’ ಸಂಶೋಧನಾ ಲೇಖನಗಳನ್ನು ಒಳಗೊಂಡಿದೆ. ಈ ಕೃತಿಗೆ ಬೆನ್ನುಡಿ ಬರೆದ ನಿರ್ಮಲಾ ಶೆಟ್ಟರ ‘ಹರಿಹರನ ರಗಳೆಯನ್ನು ಒಳಗೊಂಡು ಚರ್ಚಿಸಲ್ಪಡುವ ಲೇಖನಗಳೆಲ್ಲ ಜಾತಿ ಪದ್ದತಿಯನ್ನು ಪ್ರಶ್ನಿಸುತ್ತ ಸಾಗುತ್ತವೆ. ಇಲ್ಲಿಯ ಬರೆಹಗಳಲ್ಲಿ ಶೋಷಿತ ವರ್ಗದ ಮಲುಹಣಿ ಮೇಲ್ದರ್ಜೆ ಪಡೆಯುತ್ತಾಳೆ, ತೆರೆಮರೆಗೆ ಸರಿದ ಹದಿನೇಳು ಮಾರಯ್ಯರು ನಮ್ಮ ನಡುವಿನ ಮಾರಯ್ಯರೆ ಹೊರತು ಯಾವುದೋ ಕಲ್ಪಿತ ಪಾತ್ರಗಳಲ್ಲ ಎನ್ನುವುದಾದರೆ ಅವರಿಗೆ ಸಿಕ್ಕ ಶಿವಗಣ ಪದವಿ ನಮಗಿನ್ನೂ ಸಿಕ್ಕಿಲ್ಲದಿರುವುದರ ಕುರಿತು ಜಾಜಿಯವರು ಓದುಗನ ಒಳಗೊಂದು ಚಿಂತನೆಯನ್ನು ಜಾರಿಗೆ ತರುತ್ತಾರೆ. ಜಾಜಿಯವರ ಮೂಲ ಆಸಕ್ತಿಕ್ಷೇತ್ರದ ಅಂತಃಸ್ಸತ್ವ ಇಲ್ಲಿ ಶೋಧಿಸಲ್ಪಟ್ಟ ಶಾಸನಗಳ ಹಿನ್ನೆಲೆಯಲ್ಲಿ ಅಧಿಕಾರಶಾಹಿತ್ವವನ್ನು ಅಧುನಿಕತೆಯೊಂದಿಗೆ ಮಿಲಾಪಿಸುತ್ತದೆ ಮತ್ತು ಸಿಡಿದೆದ್ದು ಪ್ರಶ್ನಿಸುವಂತೆ ಮಾಡುವಲ್ಲಿ ಗಂಗಾವತಿ ನೆಲದ ಕುಮಾರರಾಮನ ಚರಿತೆ ನಿದರ್ಶನವಾಗಿ ನಿಲ್ಲುತ್ತದೆ. ಒಟ್ಟಾರೆ, ತಿಳಿದಷ್ಟೇ ಬಯಲು, ಓದುಗರನ್ನು ಹೊಸ ತಿಳಿವಿನ ಬಯಲಲ್ಲಿ ತಂದು ನಿಲ್ಲಿಸಿ ಚಿಂತನೆಗೆ ಹಚ್ಚುವುದು ಇಲ್ಲಿನ ಎಲ್ಲ ಲೇಖನಗಳ ವಿಶೇಷತೆ- ಕುತೂಹಲ ಕಥನಗಳಿವೆ, ಅರಿವಿನ ವಿಸ್ತಾರವಿದೆ. ಚಿಂತನೆಯ ಸುಳಿಯಿದೆ. ಬಸವಣ್ಣನವರನ್ನು ಖಾಲಿ-ಖಾಲಿ ಎದುರುಗೊಂಡು ಬಯಲಾಗುವುದಿದೆ.’ ಎಂದು ಪ್ರಶಂಸಿದ್ದಾರೆ.
©2024 Book Brahma Private Limited.