‘ಶಾಸನಗಳಲ್ಲಿ ಸೊನ್ನಲಿಗೆ ಸಿದ್ಧರಾಮ’ ಕೃತಿಯು ಮಂಜುನಾಥ ಎಸ್. ಪಾಟೀಲ ಅವರ ಸಂಶೋಧನಾ ಗ್ರಂಥವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ವಾಸುದೇವ ಬಡಿಗೇರ ಅವರು, `ಹನ್ನೆರಡನೆಯ ಶತಮಾನದ ಸಮಾನತೆಯ ತಾತ್ವಿಕ ಸಿದ್ಧಾಂತವನ್ನು ವಚನಗಳ ಮೂಲಕ ಜಾಗೃತಿಯನ್ನು ಮೂಡಿಸಿ ಅದನ್ನು ಕಾರ್ಯಗತಗೊಳಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶಿವಶರಣರ ಕುರಿತು ಐತಿಹಾಸಿಕ ಅಧ್ಯಯನ ನಡೆದಿರುವುದು ವಿರಳ. ಇದಕ್ಕೆ ಸಾಹಿತ್ಯ ದಾಖಲೆಗಳಿದ್ದರೂ ಅದನ್ನು ಅಧಿಕೃತಗೊಳಿಸಲು ಪುರಾತತ್ವೀಯ ಆಕರಗಳ ಕೊರತೆ ಸಾಕಷ್ಟಿದೆ. ಶಿವಶರಣರ ಜೀವನ ಚರಿತ್ರೆಯ ಪರಿಪೂರ್ಣ ಮತ್ತು ಸ್ಪಷ್ಟೀಕರಣಕ್ಕಾಗಿ ಲಭ್ಯ ಪುರಾತತ್ವೀಯ ಆಕರಗಳನ್ನುಕ್ರೋಢಿಕರಿಸುವ ಯೋಜನೆಯನ್ನು ರೂಪಿಸಬೇಕಾಗಿದೆ. . ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಸೊನ್ನಲಿಗೆ ಸಿದ್ಧರಾಮನಿಗೆ ಸಂಬಂಧಿಸಿದಂತೆ ಸುಮಾರು 31 ಶಾಸನಗಳನ್ನು ಗುರುತಿಸಿದ್ದಾರೆ. ಈ ಶಾಸನಗಳಲ್ಲಿ ಕಂಡುಬರುವ ಸಿದ್ಧರಾಮನ ವಚನಗಳು, ಆತನ ಅಂಕಿತನಾಮ, ಕಪಿಲಸಿದ್ಧ ಮಲ್ಲಿಕಾರ್ಜುನ ದೇವರಿಗೆ ನೀಡಿದ ದಾನ ದತ್ತಿಗಳ ಕುರಿತಾದ ವಿಷಯಗಳನ್ನು ಚರ್ಚಿಸುವುದರ ಮೂಲಕ ಆ ಶಾಸನಗಳ ಸಾರಾಂಶ ಮತ್ತು ಪಠ್ಯವನ್ನು ಈ ಕೃತಿಯಲ್ಲಿ ನೀಡಿದ್ದಾರೆ.
ಸೊನ್ನಲಿಗೆ ಸಿದ್ಧರಾಮನ ಕುರಿತಾಗಿ ಸಂಶೋಧನೆ ಕೈಗೊಳ್ಳುವವರಿಗೆ ಈ ಕೃತಿಯು ಹೆಚ್ಚಿನ ಮಾಹಿತಿ ಒದಗಿಸಿಕೊಡುತ್ತದೆ. ಇಂತಹ ಸಂಶೋಧನೆಗಳು ಅಪೇಕ್ಷಣೀಯವಾಗಿರುವ ಸಂದರ್ಭದಲ್ಲಿ ಇದೊಂದು ಇತಿಹಾಸ ಸಂಶೋಧನೆ ಕ್ಷೇತ್ರಕ್ಕೆ ನೀಡಿದ ಉಪಯುಕ್ತ ಕೊಡುಗೆ ಎನಿಸಿದೆ’ ಎಂದು ಪ್ರಶಂಸಿಸಿದ್ದಾರೆ.
ಮಂಜುನಾಥ ಎಸ್. ಪಾಟೀಲ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದವರು. ಧಾರವಾಡದ ಕರ್ನಾಟಕ ವಿ.ವಿ.ಯಿಂದ (ಇತಿಹಾಸ) ಎಂ.ಎ. ಪದವೀಧರರು. ಪ್ರಸ್ತುತ ಜಮಖಂಡಿಯ ಬಿ.ಎಚ್.ಎಸ್ ಕಲೆ ಮತ್ತು ಟಿ.ಜಿ.ಪಿ. ವಿಜ್ಞಾನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ‘ವಿಜಯಪುರ ಜಿಲ್ಲೆಯ ರಕ್ಷಣಾ ವಾಸ್ತುಶಿಲ್ಪ’ ವಿಷಯದಲ್ಲಿ ಪಿಎಚ್ .ಡಿ ಪದವೀಧರರು. ಕೃತಿಗಳು; ವಿಜಯಪುರ ಜಿಲ್ಲೆಯ ರಕ್ಷಣಾ ವಾಸ್ತುಶಿಲ್ಪ, ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ದೇವಾಲಯಗಳು ಮತ್ತು ಆಚರಣೆಗಳು, ಜಮಖಂಡಿ ತಾಲೂಕಿನ ಇತಿಹಾಸ ಮತ್ತು ಪುರಾತತ್ವ, ಯೂಸುಫ್ ಆದಿಲ್ ಖಾನ್, ಶಾಸನಗಳಲ್ಲಿ ಸೊನ್ನಲಿಗೆ ಸಿದ್ಧರಾಮ. ...
READ MORE