ಡಾ. ಮಲ್ಲಿನಾಥ ಎಸ್.ತಳವಾರ ಅವರ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸಾದರ ಪಡಿಸಿದ ಸಂಶೋಧನಾ ಮಹಾಪ್ರಬಂಧ ‘ಕಾರಂತರ ಸ್ತ್ರೀ ಪ್ರಪಂಚ’. ಇಲ್ಲಿ ಡಾ. ತಳವಾರರು ಕಾರಂತರ ಕಾದಂಬರಿಗಳ ಸ್ತ್ರೀಯರ ಒಲವು ನಿಲುವುಗಳನ್ನು ಕುರಿತಂತೆ, ಕಾರಂತರ ಕಾದಂಬರಿಗಳ ಸ್ತ್ರೀ ಪ್ರಪಂಚದಲ್ಲಿ ಬರುವ ವಿಭಿನ್ನ ಬಗೆಯ ಸ್ತ್ರೀಯರು ಮತ್ತು ಅವರ ಬದುಕಿನ ಗೊತ್ತು ಗುರಿಗಳ ನೆಲೆಯನ್ನು ಸವಿವರವಾಗಿ ವಿಶ್ಲೇಷಣೆ ಮಾಡಿದ್ದಾರೆ. ಕಾರಂತರ ಸ್ತ್ರೀ ಪರ ಧೋರಣೆ ಹಾಗೂ ಅವರ ಸ್ತ್ರೀ ಪ್ರಪಂಚ ಪ್ರತಿನಿಧಿಸುವ ವೈಚಾರಿಕ ನಿಲುವುಗಳನ್ನು ಬಹುಮಟ್ಟಿಗೆ ಪ್ರಸ್ತುತ ಕೃತಿಯಲ್ಲಿ ಅನಾವರಣಗೊಳಿಸದ್ದಾರೆ. ಹಾಗೆಯೇ ಅದರ ಜೊತೆಗೆ ಕಾರಂತರ ಸ್ತ್ರೀ ಪ್ರಪಂಚವನ್ನು ಶೋಧಿಸುವ ಜೊತೆ ಜೊತೆಗೆ ಸಾಂದರ್ಭಿಕವಾಗಿ ಸಮಕಾಲೀನ ಲೇಖಕ-ಲೇಖಕಿಯರು ಚಿತ್ರಿಸಿದ ಸ್ತ್ರೀ ಪ್ರಪಂಚದ ಜೊತೆಗೆ ತೌಲನಿಕವಾಗಿ ವಿಶ್ಲೇಷಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅಲ್ಲದೆ ಐತಿಹಾಸಿಕವಾಗಿ ಕಾರಂತರ ಕಾದಂಬರಿಗಳ ಸಮಕಾಲೀನ ಸ್ತ್ರೀ ಪ್ರಪಂಚವನ್ನು ಗಮನದಲ್ಲಿಟ್ಟುಕೊಂಡು ಬರವಣಿಗೆಯನ್ನು ರೂಪಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಕಾರಂತರು ಸ್ತ್ರೀಯರ ವಿಷಯದಲ್ಲಿ ಸಾಂಪ್ರದಾಯಿಕತೆಗೆ ಹೆಚ್ಚು ಪ್ರಾಧಾನ್ಯತೆ ನೀಡಿದ್ದಾರೆ ಎಂಬುದನ್ನು ಲೇಖಕರು ಗುರುತಿಸಿದ್ದಾರೆ. ಅಧ್ಯಯನಕ್ಕೆ ಬೇಕಾದ ಪೂರಕ ಮಾಹಿತಿಗಳನ್ನು ಕಲೆಹಾಕಿ ಶಿಸ್ತುಬದ್ಧ ಸಂಶೋಧನ ಪ್ರಬಂಧವನ್ನು ರಚಿಸಿದ್ದಾರೆ. ಯಾವುದೇ ಗೊಂದಲಗಳಿಲ್ಲದೆ ಸರಳವಾಗಿ ವಿಷಯ ಮಂಡಿಸಿದ್ದಾರೆ. ನಿರೂಪಣೆಯ ಭಾಷೆ ಸರಳವಾಗಿದ್ದು, ಖಚಿತವಾಗಿದೆ. ಕಾರಂತರ ಕಾದಂಬರಿಗಳ ಸಂದರ್ಭದಲ್ಲಿ ಇದುವರೆಗಿನ ಅಧ್ಯಯನಗಳನ್ನು ಭಿನ್ನ ನೆಲೆಯಿಂದ ಶೋಧಿಸುವ ಪ್ರಯತ್ನ ಮಾಡಿದ್ದು ಈ ಕೃತಿಯ ಹೆಗ್ಗಳಿಕೆಯಾಗಿದೆ.
©2024 Book Brahma Private Limited.