‘ಕಲ್ಯಾಣ ಚಾಲುಕ್ಯರ ಕನ್ನಡ ಶಾಸನಗಳ ವರ್ಣನಾತ್ಮಕ ವ್ಯಾಕರಣ’ ಡಾ. ಅಶೋಕಬಾಬು ಎನ್. ಕಾವಲ್ ಅವರ ಸಂಶೋಧನ ಪ್ರಬಂಧ. ಈ ಕೃತಿಗೆ ಧಾರವಾಡದ ಎಮರಿಟಸ್ ಪ್ರಾಧ್ಯಾಪಕರಾದ ಡಾ. ಸಂಗಮೇಶ ಸವದತ್ತಿಮಠ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ತಿಳಿಸುತ್ತಾ ಡಾ. ಅಶೋಕಬಾಬು ಕಾವಲ್ ಅವರ ಪ್ರಸ್ತುತ ಪ್ರಬಂಧ ಇತ್ತೀಚೆಗೆ ಕನ್ನಡದಲ್ಲಿ ಬಂದ ಭಾಷಾವಿಜ್ಞಾನ ಕ್ಷೇತ್ರದ ಸಂಪ್ರಬಂಧಗಳಲ್ಲಿ ಅಪರೂಪದ್ದಾಗಿದೆ. ಶಾಸನಗಳಲ್ಲಿ ಭಾಷೆಯನ್ನು ಆಧರಿಸಿ ವ್ಯಾಕರಣಗಳನ್ನು ರಚಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅಲ್ಲಿ ಸಿದ್ಧ ಮಾದರಿಗಳಾಗಲಿ, ನಿರ್ದಿಷ್ಟ ನುಡಿ ಮಾಹಿತಿಗಳಾಗಲಿ ಬಹಳ ಸಂಕೀರ್ಣವಾಗಿರುತ್ತವೆ. ಸಂಶೋಧಕರಿಗೆ ಅವುಗಳ ಇತಿಮಿತಿಗಳು ಸವಾಲಾಗಿರುತ್ತವೆ. ಅಂತೆಯೇ ಶಾಸನಗಳನ್ನಾಧರಿಸಿದ ವ್ಯಾಕರಣಗಳು ಕನ್ನಡದಲ್ಲಿ ಕೆಲವೇ ಕೆಲವು ಬಂದಿವೆ. ಅಂಥದರಲ್ಲಿ ಡಾ. ಅಶೋಕಬಾಬು ಅವರ ಸಾಧನೆ ಮೆಚ್ಚುವಂಥದ್ದಾಗಿದೆ. ಕರ್ನಾಟಕದ ಭಾಷಿಕ ಅಧ್ಯಯನದ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಿದೆ. ಧ್ವನಿಯಿಂದ ವಾಕ್ಯ ಘಟಕದವರೆಗಿನ ವ್ಯಾಕರಣಬದ್ಧ ಸಮಗ್ರ ವಿವೇಚನೆಯಲ್ಲದೆ ಪದಗಳ ಅಕ್ಷರಸಂಖ್ಯೆಗಳನ್ನು ಇಟ್ಟುಕೊಂಡು ರಚನಾತ್ಮಕ ಭಾಷಾ ಪ್ರಕ್ರಿಯೆಗಳನ್ನು ಸೋದಾಹರಣವಾಗಿ ವಿವರಿಸಿದ್ದು ಇಲ್ಲಿನ ವಿಶೇಷವಾಗಿದೆ ಎಂದಿದ್ದಾರೆ. ಡಾ. ಅಶೋಕಬಾಬು ಅವರು ಕನ್ನಡ ಭಾಷಾವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಬಲ್ಲವರೆಂಬ ಭರವಸೆಯನ್ನು ಹುಟ್ಟಿಸಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.