ಲೇಖಕ ರಂ.ಶ್ರೀ. ಮುಗಳಿ ಅವರ ಸಾಹಿತ್ಯ ವಿಮರ್ಶೆ ಕೃತಿ ʼಕನಡ ಕನ್ನಡ ಸಾಹಿತ್ಯ ಚರಿತ್ರೆಯ ಮುಂದುವರಿಕೆʼ. ಲೇಖಕ ಚಂಪಾ ಅವರು "ಕನ್ನಡ ನವೋದಯದ ಹಿರಿಯ ಚೇತನಗಳು ಕನ್ನಡವನ್ನು ಕಟ್ಟುವ ಕೆಲಸವನ್ನು ಎರಡು ನೆಲೆಗಳಲ್ಲಿ ಕೈಕೊಂಡಿದ್ದರು. ಒಂದು, ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೃತಿಗಳನ್ನು ರಚನೆ ಮಾಡಿ ಅಂಥ ಪ್ರಯೋಗಶೀಲತೆ ಮುಂದಿನವರಿಗೆ ಮಾದರಿಯಾಗುವಂತೆ ಮಾಡಿದ್ದು, ಇನ್ನೊಂದು, ಕನ್ನಡ ಸಂಸ್ಕೃತಿಯ ಅಭಿವೃದ್ಧಿ ಮತ್ತು ವಿಕಾಸಕ್ಕೆ ಪೂರಕವಾಗುವಂತೆ ಸೃಜನೇತರ ವಲಯದಲ್ಲಿ ಪೂರಕ ಸಾಹಿತ್ಯ ಸೃಷ್ಟಿಸಿದ್ದು. ಕನ್ನಡ ಭಾಷೆ ಮತ್ತು ಬದುಕಿಗೆ ಭದ್ರ ಬುನಾದಿ ಹಾಕಿದ ಅಂಥ ಹಿರಿಯರಲ್ಲಿ ಶ್ರೀ ರಂ.ಶ್ರೀ. ಮುಗಳಿಯವರೂ ಒಬ್ಬರು. ಶ್ರೀ ಮುಗಳಿಯವರ ಅನೇಕ ಕೃತಿಗಳು ಪ್ರಕಟವಾಗಿವೆ. ಅವರ 'ಕನ್ನಡ ಸಾಹಿತ್ಯ ಚರಿತ್ರೆ'ಯಂತೂ ಕನ್ನಡ ಅಧ್ಯಯನಾಸಕ್ತರಿಗೆ ಒಂದು ಮುಖ್ಯ ಆಕರ ಗ್ರಂಥವಾಗಿದೆ. ಈ ಕೃತಿಯ ಪ್ರಕಟಣೆಯ ನಂತರವೂ ಶ್ರೀ ಮುಗಳಿಯವರು ಈ ನಿಟ್ಟಿನಲ್ಲಿ ಅನೇಕ ಲೇಖನಗಳನ್ನು ಬರೆದರು. ಅವು ಬೇರೆ ಬೇರೆ ಸಂಕಲನಗಳಲ್ಲಿ ಬಂದಿವೆ. ಎಂದಿದ್ದಾರೆ.
ಕನ್ನಡ ಸಾಹಿತ್ಯ ಚರಿತ್ರೆಯ ಮೂಲಕ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾದ ರಂಗನಾಥ ಶ್ರೀನಿವಾಸ ಮುಗಳಿ ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರು. 1906ರ ಜುಲೈ 15ರಂದು ಜನಿಸಿದರು. ತಂದೆ ಶ್ರೀನಿವಾಸರಾವ್ ಮತ್ತು ತಾಯಿ ಕಮಲಕ್ಕ. ಬಾಗಲಕೋಟೆ, ಬಿಜಾಪುರಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. (1928) ಎಂ.ಎ. (1930) ಮಾಡಿದರು. 1932ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಶಿಕ್ಷಕರಾಗಿ ಸೇರಿದರು. 1933ರಲ್ಲಿ ಸಾಂಗ್ಲಿಯ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ 1966ರಲ್ಲಿ ನಿವೃತ್ತರಾದರು. ಕೆಲವು ಕಾಲ ಸರಕಾರದ ಸಾಹಿತ್ಯ ಸಂಸ್ಕೃತಿ ಇಲಾಖೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ...
READ MORE