ಕನ್ನಡ ವಿದ್ವಾಂಸರಲ್ಲಿ ಡಾ. ಎಂ.ಎಂ. ಕಲಬುರ್ಗಿಯವರು ಒಬ್ಬರು. ಕಲಬುರ್ಗಿಯವರು ಮಾತ್ರ ಎಲ್ಲಾ ಕ್ಷೇತ್ರಾಧ್ಯಯನಗಳಲ್ಲಿ ಸ್ವತಂತ್ರ ಪ್ರತಿಭೆ ಮೆರೆದಿದ್ದಾರೆ. ಶಾಸನ, ವಾಸ್ತುಶಿಲ್ಪ, ಸ್ಮಾರಕಗಳ ಪರಿವೀಕ್ಷಣೆ, ಶಿಷ್ಟ ಸಾಹಿತ್ಯ, ಜಾನಪದ ಸಾಹಿತ್ಯ, ಚರಿತ್ರೆ, ಹಸ್ತಪ್ರತಿ, ಗ್ರಂಥ ಸಂಪಾದನೆ, ನಾಮವಿಜ್ಞಾನ, ಪ್ರಾಚ್ಯವಸ್ತು, ವ್ಯಾಕರಣ, ಧರ್ಮ, ಸಂಸ್ಕೃತಿ, ಛಂದಸ್ಸು, ಸಂಶೋಧನೆ, ವಿಮರ್ಶೆ, ನಾಟಕ, ಕಾವ್ಯ ಹೀಗೆ ಹತ್ತು ಹಲವಾರು ಜ್ಞಾನ-ವಿಜ್ಞಾನ ಕ್ಷೇತ್ರ ಗಳಲ್ಲೂ ತಮ್ಮ ಅಧಿಕೃತ ಮಾರ್ಗದ ಛಾಪು ಮೂಡಿಸಿರುವ ಶ್ರೇಯಸ್ಸು ಡಾ. ಕಲಬುರ್ಗಿಯವರಿಗೆ ಸಲ್ಲುತ್ತದೆ. ಡಾ. ಕಲಬುರ್ಗಿಯವರು ಹಾಕಿದ ಪ್ರತಿಮಾರ್ಗವು ಅಧಿಕೃತವೆಂದೇ ಎಲ್ಲ ವಿದ್ವಾಂಸರು ಮನ್ನಿಸಿದ್ದಾರೆ. ಅವರ ಮಾರ್ಗವನ್ನು ಮೀರುವ, ವಿಶ್ಲೇಷಿಸುವ ಪ್ರಯತ್ನವನ್ನು ಯಾರೂ ಧೈರ್ಯದಿಂದ ಮಾಡಿದಂತಿಲ್ಲ. ಅದರಲ್ಲೂ ಸಂಶೋಧನ ವಿಷಯವನ್ನು ಪರಾಮರ್ಶಿಸುವ, ಅವರ ಬರಹದ ಔಚಿತ್ಯತೆಯನ್ನು ಪರೀಕ್ಷಿಸುವ ಪ್ರಯತ್ನವನ್ನು ಯಾರೊಬ್ಬರೂ ಮಾಡಿಲ್ಲವೆಂದೇ ಹೇಳಬೇಕು. ಆದರೆ ಡಾ. ಕಲ್ಯಾಣರಾವ ಜಿ. ಪಾಟೀಲರು ‘ಡಾ. ಕಲಬುರ್ಗಿಯವರ ಶೋಧಗಳು’ ಎಂಬಂತಹ ಗಂಭೀರ ವಿಷಯವನ್ನು ಕೈಗೆತ್ತಿಕೊಂಡು ಆ ಮೂಲಕ ತಾವೊಬ್ಬ ಪರಿಪೂರ್ಣ ವ್ಯಕ್ತಿತ್ವವನ್ನು ವಿಶ್ಲೇಷಿಸುವ, ಸಂಶೋಧನ ಅಧ್ಯಯನವನ್ನು ಸಮೀಕ್ಷಿಸುವ ಸಮರ್ಥ ಸಂಶೋಧಕ ಎಂಬುವುದನ್ನು ಈ ಕೃತಿಯ ಮುಖಾಂತರ ಸಾಬೀತುಪಡಿಸಿದ್ದಾರೆ. ಡಾ. ವೀರಣ್ಣ ದಂಡೆಯವರ ಮಾರ್ಗದರ್ಶನದಲ್ಲಿ ನಾಲ್ಕೈದು ವರ್ಷಗಳವರೆಗೆ ಸತತ ಅಧ್ಯಯನ, ವಿಶ್ಲೇಷಣೆ, ಕೈಗೊಂಡು ‘ಡಾ. ಎಂ.ಎಂ. ಕಲಬುರ್ಗಿ ಅವರ ಶೋಧಗಳು’ ಎಂಬ ಶೀರ್ಷಿಕೆಯಡಿ ಸಂಶೋಧನ ಮಹಾಪ್ರಬಂಧವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಗೆ ಸಾದರಪಡಿಸಿ ಡಾಕ್ಟರೆಟ್ ಪದವಿ ಪಡೆದಿರುವರು. ಶ್ರೀಯುತರ ಸಂಶೋಧನೆಯ ಗುಣಮಟ್ಟ ಮತ್ತು ಡಾ. ಎಂ.ಎಂ. ಕಲಬುರ್ಗಿಯವರ ಮೇಲಿನ ಗೌರವದಿಂದಾಗಿ ಸಂಶೋಧನ ಗ್ರಂಥವು ಡಾ. ಕಲಬುರ್ಗಿಯವರೇ ಹುಟ್ಟು ಹಾಕಿದ್ದ, ಗದಗ ತೋಂಟದಾರ್ಯ ಮಠದ ಪೂಜ್ಯ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಸಹಕಾರದಿಂದ ವ್ಯವಸ್ಥಿತವಾಗಿ ಬೆಳೆದುನಿಂತಿರುವ ‘ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ’ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಡಂಬಳ-ಗದಗ ದಿಂದ ಪ್ರಕಟಗೊಂಡಿದೆ. ಡಾ. ಎಂ.ಎಂ. ಕಲಬುರ್ಗಿಯವರ ‘ಮಾರ್ಗ’ ಹೆಸರಿನ ಏಳು ಸಂಪುಟಗಳಲ್ಲಿ ಅಡಕವಾಗಿರುವ 754 ಸಂಪ್ರಬಂಧಗಳನ್ನು ಅನುಲಕ್ಷಿಸಿ ಈ ಶೋಧ ಸಂಪುಟವನ್ನು ಸಿದ್ಧಪಡಿಸಿದ್ದಾರೆ. ಅಧ್ಯಯನದ ರೂಪುರೇಷೆ, ಸಮಾರೋಪ, ಅನುಬಂಧಗಳನ್ನು ಹೊರತುಪಡಿಸಿ ಏಳು ಪ್ರಮುಖ ಅಧ್ಯಾಯಗಳ 141 ಉಪಶೀರ್ಷಿಕೆಗಳಡಿ ಕಲಬುರ್ಗಿಯವರ ಸಂಶೋಧನ ಸಾಮಗ್ರಿಯನ್ನು ಶೋಧಿಸಿ, ವಸ್ತುನಿಷ್ಠ ನೆಲೆಯಲ್ಲಿ ಅಧ್ಯಯನ ಮಾಡಿದ್ದಾರೆ.
©2024 Book Brahma Private Limited.