‘ಉಡುಪಿ ಜಿಲ್ಲೆಯ ಸಿರಿ ಆಲಡೆಗಳು’ ಅರುಣಕುಮಾರ ಎಸ್.ಆರ್. ಅವರ ಸಂಶೋಧನಾತ್ಮಕ ಲೇಖನಗಳು. ಕರ್ನಾಟಕದ ಕರಾವಳಿ ಭಾಗದಲ್ಲಿ ಬಂಟ ಸಮುದಾಯದ `ಸಿರಿ' ಎಂಬ ಐತಿಹಾಸಿಕ ಹೆಣ್ಣುಮಗಳು ಸಾಮಾಜಿಕ, ಕೌಟುಂಬಿಕ, ಭಾವನಾತ್ಮಕ ಅಸಮಾನತೆಯ ವಿರುದ್ದ ಹೋರಾಡಿದ ಕಥೆಯ ಅಭಿನಯ ರೂಪವೇ 'ಸಿರಿ ಮತಾಚರಣೆ' ಎಂಬ ವಿಶಿಷ್ಟ ಆರಾಧನಾ ಪರಂಪರೆ.
ಬ್ರಾಹ್ಮಣೇತರ ವರ್ಗ, ಅದರಲ್ಲೂ ವಿಶೇಷವಾಗಿ ಸ್ತ್ರೀಯರೇ ಹೆಚ್ಚಾಗಿ ಪಾಲ್ಗೊಳ್ಳುವ ಈ ಮತಾಚರಣೆಯಲ್ಲಿ ಅವರ ಬದುಕು, ಭಾವಗಳಿಗೆ ಜೀವ ತುಂಬುವ ಮನಃಶಾಸ್ತ್ರೀಯ ಪರಿಹಾರ ರೂಪದ ಆರಾಧನೆ ಇದು. 'ಸಿರಿ ಆಲಡೆಗಳು' ಈ ಮತಾಚರಣೆಯ ಕೇಂದ್ರಗಳು ಮಾತ್ರವಲ್ಲ ಸ್ತ್ರೀಯರ ಬದುಕಿಗೆ ನೆಮ್ಮದಿ ನೀಡುವ ಸಂಕೀರ್ಣ ತಾಣಗಳು. ಈ ಆರಾಧನಾ ಕೇಂದ್ರಗಳ ಕುರಿತು ಸಂಪೂರ್ಣ ಅಧ್ಯಯನ ನಡೆದಿರುವುದು ಕಡಿಮೆ.
ಅರುಣಕುಮಾರ್, ಅವಿಭಜಿತ ದ.ಕ. ಜಿಲ್ಲೆಯ ಸಿರಿ ಆರಾಧನಾ ಕೇಂದ್ರಗಳ ಕುರಿತು ತಲಸ್ಪರ್ಶಿ ಅಧ್ಯಯನ ಮಾಡಿ ಪಿಎಚ್.ಡಿ. ಪಡೆದವರು. ಈ ಕೃತಿ ಅವರ ಸಂಶೋಧನ ಅಧ್ಯಯನದ ಒಂದು ಭಾಗವಾದ ಉಡುಪಿ ಜಿಲ್ಲೆಯ ಸಿರಿ ಆಲಡೆಗಳ ಕುರಿತು ಆಂಶಿಕ ಮಾಹಿತಿಯನ್ನೊಳಗೊಂಡ ಕೃತಿ. ಸ್ವತಃ ಲೇಖಕರು ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಈ ಅಧ್ಯಯನದಲ್ಲಿ ವಿಶೇಷ ಒಳನೋಟಗಳಿವೆ. ಸಿರಿ ಆಲಡೆಗಳ ಕುರಿತು ಅಧ್ಯಯನಾಸಕ್ತರಿಗೆ ಈ ಹೊತ್ತಗೆ ಒಂದು ಉತ್ತಮ ಆಕರ ಗ್ರಂಥ.
©2024 Book Brahma Private Limited.