‘ಮಾತೃದೇವತೆ’- ಉಗಮ ಮತ್ತು ವಿಕಾಸ ಪ್ರೊ. ಕಲವೀರ ಮನ್ವಾಚಾರ ಅವರ ಸಂಶೋಧನಾ ಕೃತಿ. ನಿಗೂಢ ಪಂಥಗಳಾದ ಕಾಪಾಲಿಕ, ಕಾಳಾಮುಖ, ಶಾಕ್ತ ಪಂಥಗಳ ಅಧ್ಯಯನ ಕನ್ನಡದಲ್ಲಿ ಅತಿ ವಿರಳವೆಂದೇ ಹೇಳಬಹುದು. ಅದರಲ್ಲೂ ಶಕ್ತಿ ಆರಾಧನೆಯನ್ನು ಕುರಿತು ತಳಸ್ಪರ್ಶಿಯಾದ ಅಧ್ಯಯನಗಳು ಕನ್ನಡದಲ್ಲಿ ಬಂದಿಲ್ಲ. ಕನ್ನಡ ವಿದ್ವತ್ ಲೋಕ ಈ ಕುರಿತಂತೆ ಒಂದು ನಿರ್ಲಕ್ಷ್ಯ ಧೋರಣೆಯನ್ನು ತಳೆದುದೇ ಆಗಿದೆ. ಆದರೆ ಅದಕ್ಕೆ ವಿರುದ್ಧವಾಗಿ ಜನಪದ ದೇವತೆಗಳನ್ನು ಕುರಿತು ತಕ್ಕಮಟ್ಟಿಗೆ ಅಧ್ಯಯನಗಳು ಆಗಿವೆ.
ಇಂಗ್ಲಿಷ್ನಲ್ಲಿ ಶಕ್ತಿ ಆರಾಧನೆ ಅಥವಾ ಮಾತೃದೇವತೆ ಆರಾಧನೆಯನ್ನು ಕುರಿತು ಸಮೃದ್ಧವಾದ ಸಾಹಿತ್ಯ ಸೃಷ್ಟಿಯಾಗಿದೆ. ಇ.ಓ.ಜೇಮ್ಸ್ , ಡಬ್ಲ್ಯು.ಟಿ.ಎಲ್ ಮೋರ್, ಗೇಟ್ ವುಡ್, ಹೆನರಿ ವೈಟ್ ಹೆಡ್, ಎರಿಕ್ ನ್ಯೂಮನ್, ಮ್ಯಾಕ್ಸ್ ವೆಲ್, ಮೊದಲಾದ ವಿದ್ವಾಂಸರು ಭಾರತೀಯ ಅದರಲ್ಲೂ ದಕ್ಷಿಣ ಭಾರತದ ಮಾತೃದೇವತಾ ಪರಂಪರೆಯನ್ನು ಅಧ್ಯಯನಕ್ಕೆ ಒಳಗು ಮಾಡಿದ್ದಾರೆ. ಅದರಂತೆ ಭಾರತೀಯ ವಿದ್ವಾಂಸರಾದ ಎನ್. ಎನ್. ಭಟ್ಟಾಚಾರ್ಯ, ಕೃಷ್ಣಶಾಸ್ತ್ರಿ ಹೆಚ್.ವಿ. ಎಸ್. ಅಗರವಾಲ್, ಡಿ.ಡಿ.ಕೊಸಾಂಬಿ, ಪ್ರಫುಲ್ ಜಯಕರ್ ಮೊದಲಾದ ಹಿರಿಯ ವಿದ್ವಾಂಸರು ಅಧ್ಯಯನ ಮಾಡಿದ್ದಾರೆ.
ಕನ್ನಡದಲ್ಲಿ ಶಾಕ್ತ ಪರಂಪರೆಯನ್ನು ಕುರಿತು ಅಧ್ಯಯನವನ್ನು ಕೈಗೊಂಡವರಲ್ಲಿ ಡಾ.ಕೆ.ಜಿ. ನಾಗರಾಜಪ್ಪ ಅವರನ್ನು ಹೆಸರಿಸಬಹುದು. ಆದರೆ ಕನ್ನಡದಲ್ಲಿ ಮಾತೃದೇವತೆಗಳ ಹುಟ್ಟು ಮತ್ತು ವಿಕಾಸವನ್ನು ಕುರಿತು ಪುಸ್ತಕಗಳು ಇಲ್ಲವೇ ಇಲ್ಲ ಹಾಗಾಗಿ ಪ್ರೊ. ಕಲವೀರ ಮನ್ವಾಚಾರ ಅವರ ಈ ಕೃತಿ ಕನ್ನಡದಲ್ಲಿ ಮೊದಲ ಪ್ರಯತ್ನವೆನ್ನಬಹುದು.
©2024 Book Brahma Private Limited.