ಲೇಖಕ ಪ್ರೊ. ಕಲವೀರ ಮನ್ವಾಚಾರ ಮೂಲತಃ ಅರೆಮಲೆನಾಡಿನ ಭಾಗವಾದ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ನೇಶ್ವಿ ಗ್ರಾಮದವರು. ಓದಿದ್ದು ಮತ್ತು ಬೆಳೆದದ್ದು ಬೆಂಗಳೂರಿನಲ್ಲಿ. ಕಳೆದ 25ವರ್ಷಗಳಿಂದ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಶಾಸನಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಸಹ ಪ್ರಾಧ್ಯಾಪಕರಾಗಿ ಪ್ರಸ್ತುತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಶಾಸನಶಾಸ್ತ್ರ ವಿಭಾಗದ ಬಹುದೊಡ್ಡ ಕಾರ್ಯವಾದ ಶಾಸನ ಸಂಪುಟಗಳ ಸಂಪಾದನೆಯಲ್ಲಿ ಕೆಲಸ ಮಾಡಿದ್ದಾರೆ. ಆ ಮೂಲಕ ತೆರೆದುಕೊಂಡ ಇವರ ಸಂಶೋಧನೆ ಸಾಹಿತ್ಯ, ಶಾಸನ, ಶಿಲ್ಪಕಲೆ, ನಿಗೂಢ ಪಂಥಗಳು ಮುಂತಾದ ಶಿಸ್ತುಗಳಲ್ಲಿ ಮುಂದುವರೆಯುತ್ತಲಿದೆ. ಮಾತೃ ದೇವತೆ ಉಗಮ ಮತ್ತು ವಿಕಾಸ’ ಎನ್ನುವ ಕೃತಿ ಇವರ ಪಿಎಚ್.ಡಿ ಮಹಾಪ್ರಬಂಧ. ಈ ಕೃತಿಯು ಪಿಎಚ್.ಡಿ ಪ್ರಬಂಧವಾದರೂ ಪ್ರಕಟಣಾ ಸಂದರ್ಭದಲ್ಲಿ ಅಮೂಲಾಗ್ರವಾಗಿ ಬದಲಾವಣೆಯನ್ನು ಮಾಡಿದ್ದಾರೆ. ಇದರ ಮುಂದುವರೆದ ಭಾಗವಾಗಿ ಲಜ್ಜಾಗೌರಿಯನ್ನು ಕುರಿತು ವೈಯಕ್ತಿಕ ಯೋಜನೆಯನ್ನು ಕೈಗೊಂಡಿದ್ದಾರೆ. ಕಾಳಾಮುಖರು ಮತ್ತು ಏಕಾಂತರಾಮಯ್ಯನನ್ನು ಕುರಿತ ಸಂಶೋಧನೆ ಮುಗಿದಿದ್ದು, ಅದು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಈಗಾಗಲೇ ಮುದ್ರಣದ ಅಂತದಲ್ಲಿದೆ.