ಕಿತ್ತೂರು ಸಂಸ್ಥಾನದ ದಾಖಲೆಗಳ ಶೋಧ-ಅನುವಾದ -ಪ್ರಕಟಣೆ ಯೋಜನೆ ಅಡಿಯಲ್ಲಿ `ಕಿತ್ತೂರು ಸಂಸ್ಥಾನದ ದಾಖಲೆಗಳು:ಸಂಪುಟ-1' ಎಂಬ ಸಂಶೋಧನಾತ್ಮಕ ಕೃತಿಯನ್ನು ಪ್ರೊ. ಮಲ್ಲಿಕಾರ್ಜುನ ಹಿರೇಮಠ ಪ್ರಧಾನ ಸಂಪಾದಕತ್ವದಲ್ಲಿ ಡಾ. ಎ.ಬಿ. ವಗ್ಗರ ಅವರು ಸಂಪಾದಿಸಿದ್ದಾರೆ. ಮುಂಬೈ ಪ್ರಾಂತ್ಯದಲ್ಲಿ ‘ದಕ್ಷಿಣ ಮಹಾರಟ್ಟಾ ದೇಶ’ ಎಂದು ಕರೆಯಲ್ಪಟ್ಟ ಪ್ರದೇಶದಲ್ಲಿನ ಒಂದು ಚಿಕ್ಕ ಸಂಸ್ಥಾನವಾಗಿದ್ದ ಕಿತ್ತೂರು, ಬ್ರಿಟಿಷ್ ರೊಂದಿಗೆ ಹೋರಾಡುತ್ತಲೇ ಅವಸಾನ ಹೊಂದಿತು. ಸಂಪಗಾಂವ್ ದಲ್ಲಿದ್ದ ಹಿರೇಮಲ್ಲಶೆಟ್ಟಿ ಹಾಗೂ ಚಿಕ್ಕಮಲ್ಲಶೆಟ್ಟಿ ಎಂಬುವರು ಕಿತ್ತೂರು ಸಂಸ್ಥಾನದ ಸ್ಥಾಪಕರು. ಚೆನ್ನಮ್ಮಳ ಪ್ರಭುತ್ವದಲ್ಲಿ ಸಂಸ್ಥಾನದ ಆಳ್ವಿಕೆ ಮುಂದುವರಿದರೂ ಬ್ರಿಟಿಷರಿಂದ ಸೋಲು ಅನುಭವಿಸಿ, ಬ್ರಿಟಿಷರ ನೇರ ಆಳ್ವಿಕೆಗೆ ಒಳಪಟ್ಟಿತ್ತು. ನಂತರ ಹೋರಾಟ ಮುಂದುವರಿಸಿದ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಲಾಯಿತು. ಹೀಗೆ, ಕಿತ್ತೂರು ಸಂಸ್ಥಾನ ಅವನತಿಗೊಂಡಿದ್ದು, ಈ ಸಂಸ್ಥಾನದ ಆರಂಭದಿಂದ ಹಿಡಿದು ಅವಸಾನದವರೆಗಿನ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದು, ಈ ಕೃತಿಯು ಸಂಶೋಧನಾಧ್ಯಯನಕ್ಕೆ ಉತ್ತಮ ಆಕರವಾಗಿದೆ
ಕಿತ್ತೂರಿನ ಹಕ್ಕು ಪ್ರಸ್ತಾವನೆ ಕುರಿತು (06-07-1824) ಥ್ಯಾಕರೆ ಬರೆದ ಪತ್ರ, ಸಂಸ್ಥಾನವನ್ನು ಮುಂದುವರಿಸಲು (10-07-1824) ಶಿವಲಿಂಗ ಸರ್ಜ್ನು ಥ್ಯಾಕರೆಗೆ ಬರೆದ ಪತ್ರ, ಕಿತ್ತೂರು ವಶಪಡಿಸಿಕೊಂಡ ಸಂಪತ್ತಿಗೆ ಸಂಭಂಧಿಸಿದ(31-12-1824) ನಿರ್ಧಾರದ ಪತ್ರ .ಹೀಗೆ 153 ದಾಖಲೆಗಳ ಇಂಗ್ಲಿಷ್ ಪತ್ರಗಳು ಹಾಗೂ ಅವುಗಳ ಅನುವಾದ ಪಠ್ಯವನ್ನು ಕೃತಿಯಲ್ಲಿ ನೀಡಿದ್ದು, ಕಿತ್ತೂರು ಸಂಸ್ಥಾನ ಹಾಗೂ ಬ್ರಿಟಿಷ್ ಆಡಳಿತದ ಮಧ್ಯೆ ನಡೆದ ಪತ್ರ ಸಮರ, ಅದು ನೀಡುವ ಚಿತ್ರಣದ ಮೂಲಕ ಕಿತ್ತೂರಿನ ಇತಿಹಾಸ ಹಾಗೂ ಆ ಸಂಸ್ಥಾನದ ಕೊನೆಯ ಗಳಿಗೆಗಳ ದಾರುಣತೆಯನ್ನು ತಿಳಿಯಲು ಅತ್ಯಂತ ಮಹತ್ವದ ಆಕರವಾಗಿ ಈ ಕೃತಿಯು ನಿಲ್ಲುತ್ತದೆ.
ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಹಾಗೂ ಅಗತ್ಯದ ಕೆಲ ದಾಖಲೆಗಳೊಂದಿಗೆ ಸಂಶೋಧನೆ ನಡೆಸಿದ್ದು ಹೊರತುಪಡಿಸಿದರೆ ಈ ಸಂಸ್ಥಾನದ ಸಮಗ್ರ ದಾಖಲೆಗಳನ್ನು ಒಂದೆಡೆ ಸಿಗುವಂತೆ ಮಾಡಿದ ಹೆಗ್ಗಳಿಕೆಯೂ ಈ ಕೃತಿಯದ್ದು. ದೇಶೀಯ ಸಂಗ್ರಾಮವನ್ನು ತುಳಿಯಲು ಬ್ರಿಟಿಷ್ ವಸಾಹತುಶಾಹಿ ಹೇಗೆ ಒಳಸಂಚು ನಡೆಸುತ್ತದೆ ಎಂಬ ಬಗ್ಗೆಯೂ ಕಿತ್ತೂರು ಸಂಸ್ಥಾನದ ಇತಿಹಾಸದಲ್ಲಿ ಕಾಣಬಹುದು. ಒಂದು ಸಂಸ್ಥಾನವು ತನ್ನೊಳಗಿನ ಶತ್ರುಗಳ ಸಂಚಿನಿಂದ ಕುಸಿಯುವ ಹಾಗೂ ಈ ಪರಿಸ್ಥಿತಿಯ ಲಾಭವನ್ನು ಬಾಹ್ಯಶತ್ರುಗಳು ಪಡೆದು ಹೇಗೆ ಗೆಲುವು ಸಾಧಿಸುತ್ತಾರೆ ಎಂಬ ತೌಲನಿಕ ಅಧ್ಯಯನಕ್ಕೂ ಕಿತ್ತೂರಿನ ಸಂಸ್ಥಾನದ ಈ ದಾಖಲೆಗಳು ಮಹತ್ವದ ಪುರಾವೆಗಳನ್ನೂ ಒದಗಿಸುತ್ತವೆ.
©2024 Book Brahma Private Limited.