ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಬಂಜೆಗೆರೆ ಯವರು ಸಲ್ಲಿಸಿದ ಡಿ.ಲಿಟ್ ಪ್ರಬಂಧದ ಪರಿಷ್ಕೃತ ಬರಹ ಈ ಗ್ರಂಥದ ರೂಪದಲ್ಲಿದೆ. ರಾಜಕೀಯಾರ್ಥಿಕ ವಿಶ್ಲೇಷಣೆಯ ವಿಧಾನವನ್ನು ಅಳವಡಿಸಿಕೊಂಡು ಕನ್ನಡದ ರಾಷ್ಟ್ರೀಯತೆಯನ್ನು ಕಟ್ಟಿಕೊಡುವ ಪ್ರಯತ್ನವನ್ನು ಬಂಜಗೆರೆ ಈ ಕೃತಿಯಲ್ಲಿ ಮಾಡಿದ್ದಾರೆ. ಈ ಪುಸ್ತಕದಲ್ಲಿ ಒಟ್ಟು ೨೦ ಅಧ್ಯಾಯಗಳಿವೆ. ಕರ್ನಾಟಕವೆಂಬುದೇನು ಹೆಸರೆ ಬರಿಯ ಮಣ್ಣಿಗೆ… ರಾಷ್ಟ್ರೀಯತೆ- ರಾಷ್ಟ್ರತ್ವದ ಪರಿಕಲ್ಪನೆ ಹಾಗೂ ಬೆಳವಣಿಗೆ ಹಿನ್ನೋಟ, ಭಾರತದಲ್ಲಿ ರಾಷ್ಟ್ರೀಯವಾದ, ಭಾರತದಲ್ಲಿ ಭಾಷಾವಾರು ರಾಷ್ಟ್ರೀಯತೆಗಳ ಹೋರಾಟದ ಬೆಳವಣಿಗೆ, ಕರ್ನಾಟಕ ಹಾಗೂ ಕನ್ನಡ ಭಾಷೆಯ ಆರಂಭಿಕ ಪರಿಚಯ ನೀಡಿರುವ ಲೇಖಕರು ನಂತರ ಅಧ್ಯಾಯಗಳನ್ನು ಕಾಲಾನುಕ್ರಮಣಿಕೆಯನ್ನು ವಿಂಗಡಿಸಿ ವಿಶ್ಲೇಷಿಸಿದ್ದಾರೆ. ೧೯೪೭ರ ನಂತರ ಕನ್ನಡ ರಾಷ್ಟ್ರೀಯತೆಯ ರಾಜಕೀಯ ಆರ್ಥಿಕ ಸ್ಥಾನಮಾನ ಹಾಗೂ ಕಾರಣಗಳ ವಿಶ್ಲೇಷಣೆಯ ವರೆಗೂ ಈ ಚರ್ಚೆ ಹರಡಿದೆ.
ಕನ್ನಡ ರಾಷ್ಟ್ರೀಯತೆಯ ಉಗಮ ಹಾಗೂ ಬೆಳವಣಿಗೆಯ ಹಾದಿಯ ವ್ಯಾಖ್ಯಾನ, ವಿಶ್ಲೇಷಣೆ ಇಲ್ಲಿ ನೋಡಲು ಸಿಗುತ್ತದೆ.
ಬಸವರಾಜ ಕಲ್ಗುಡಿ ಅವರು ಬೆನ್ನುಡಿಯಲ್ಲಿ ’ರಾಷ್ಟ್ರೀಯತೆ ಎನ್ನುವುದನ್ನು ಆಯಾ ಭಾಷಿಕ ಜನರ ಬದುಕಿನ ಏಕರೂಪೀ ನೆಲೆಯಲ್ಲಿ ಮಾತ್ರ ಗ್ರಹಿಸಲಾಗುವುದಿಲ್ಲ. ಏಕೆಂದರೆ ಭಾಷಾ ಸಂವೇದನೆ ಇಂಥ ಕಡೆ ಬಹುಪಾಲು ಅಮುಖ್ಯವಾಗಿ ಆಯಾ ಭಾಷಿಕ ಸಮುದಾಯದ ವರ್ಗ, ಜಾತಿ ಶ್ರೇಣೀಕರಣಗಳು ಮುನ್ನೆಲೆಗೆ ಬಂದು ಬಿಡುತ್ತವೆ. ಆದ್ದರಿಂದ ರಾಷ್ಟ್ರೀಯತೆ ಎನ್ನುವುದು ವರ್ಗ, ಜಾತಿ ಶ್ರೇಣೀಕರಣವನ್ನು ಮೀರಿದ ಒಂದು ಸಂವೇದನೆಯೆಂದೇ ನಾವು ಭಾವಿಸಬೇಕಾಗುತ್ತದೆ. ಇಂಥ ಸಂವೇದನೆ ಎಲ್ಲ ಕಾಲಕ್ಕೂ ಆಯಾ ಭಾಷಿಕ ಜನರ ಬದುಕಿನಲ್ಲಿ ಜಾಗೃತವಾಗಿರುತ್ತದೆಯೇ? ಈ ಪ್ರಶ್ನೆಗೆ ಉತ್ತರ ಬಹುಶಃ ನಕಾರಾತ್ಮಕವಾಗಿಯೇ ಇರುತ್ತದೆ. ಏಕೆಂದರೆ ಚರಿತ್ರೆಯ ಗತಿತರ್ಕವು ಮನುಷ್ಯನ ಬದುಕನ್ನು, ಭಾಷೆಯ ಚಹರೆಯನ್ನೇ ಪ್ರಧಾನವೆಂದು ಎಲ್ಲ ವೇಳೆಯಲ್ಲೂ ಭಾವಿಸುವುದಿಲ್ಲ..’ ಎಂದಿದ್ದಾರೆ. ಜಿ. ರಾಮಕೃಷ್ಣ ಅವರು ’ಬೌದ್ಧಿಕ ಶಿಸ್ತನ್ನು ಕಾಪಾಡಿಕೊಂಡು ಉದ್ವೇಗರಹಿತವಾದ ಒಂದು ಸಮಗ್ರ ವಿವೇಚನೆಯನ್ನು ಜಯಪ್ರಕಾಶ್ ಈ ಪ್ರಬಂಧದಲ್ಲಿ ಮಂಡಿಸಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.