ಕುವೆಂಪು ತಮ್ಮ ಕಾವ್ಯ ಸೃಷ್ಟಿ ಮತ್ತು ಜೀವನ ದೃಷ್ಟಿಯಲ್ಲಿ ರಾಮಕೃಷ್ಣ ಪರಮಹಂಸ ದರ್ಶನ ಪರಂಪರೆಯಿಂದ ಹೇಗೆ ಪ್ರಭಾವಿತರಾದರು ಎಂಬುದನ್ನು ಡಾ. ಗುರುಪಾದ ಮರಿಗುದ್ದಿಯವರ ‘ಪರಮಹಂಸ ಕೃಪಾ ಹಸ್ತ’ ಪುಸ್ತಕ ಅನನ್ಯವಾಗಿ ತೆರೆದಿಡುತ್ತಾ ಹೋಗಿದೆ. ಕುವೆಂಪು ಅವರ ಆತ್ಮಕತೆ ‘ನೆನಪಿನ ದೋಣಿಯಲ್ಲಿ’ ಅಂತರ ಗಂಗೆಯಂತೆ ಹರಿದಿರುವ ಪರಮಹಂಸ ಪ್ರಭಾವವನ್ನು ಡಾ. ಮರಗುದ್ದಿ ತಮ್ಮ ಆಳ ಓದುವಿಕೆ ಒಳನೋಟಗಳಿಂದ ತಮ್ಮ ಪ್ರತಿಭೆಯ ತೀರದ ನಡುವೆ ಆ ಅಂತರಗಂಗೆ ದೃಗ್ಗೋಚರಚಾಗುವಂತೆ ಮಾಡಿದ್ದಾರೆ. ಚದುರಿದ ಚಿತ್ರಗಳಿಗೆ ಸುಭದ್ರ ಚೌಕಟ್ಟು ಹಾಕಿದ್ದಾರೆ ಪರಮಹಂಸ ಎಂಬ “phenomenon” ‘ಗುರುತ್ವ’ ದೆಡೆಗೆ ಸೆಳೆಯಲ್ಪಟ್ಟ ಕುವೆಂಪುರವರ ಚೇತನ ಅನಿಕೇತನವಾಗಿ ಹೇಗೆ ವಿಶ್ವ ಚೇತನವಾಯಿತು ಎಂಬುದನ್ನು ‘ ಅಧ್ಯಾತ್ಮ ವಿಜ್ಞಾನದ ಹೆಜ್ಜೆ ಗುರುತುಗಳು ’ ಎಂದು ಉಲ್ಲೇಖಿಸುವ ಲೇಖಕರು ದಿವ್ಯಗುರುವಿನ ಕೃಪಾ ಹಸ್ತ ಕಾವ್ಯಗುರುವಿನ ಲೌಕಿಕ , ಅಲೌಕಿಕ ಮಾರ್ಗಕ್ಕೆ ಹೇಗೆ ಕೈದೀವಿಗೆಯಾಯಿತು ಎಂದು ಈ ಪುಟ್ಟ ಕೃತಿಯಲ್ಲಿ ಸ್ಪಷ್ಟವಾಗಿ ಬರೆಯುತ್ತಾ ಹೋಗಿದ್ದಾರೆ.
ಕುವೆಂಪುರವರ ಮಾತು, ವ್ಯಕ್ತಿತ್ವ, ದರ್ಶನ ಪರೀಕ್ಷೆಗೊಳಪಟ್ಟಿದೆ. ಕೆಲ ಕೊಂಕು ನುಡಿಗಳು ಬಂದಿವೆ. ಅವರೆಲ್ಲರಿಗೂ ಕುವೆಂಪು ಸಹಜವಾಗಿ “ನಾನೇರುವೆತ್ತರಕೆ ನೀನೇರಬಲ್ಲೆಯಾ?!!” ಎಂದು ಕೇಳುತ್ತಾರೆ. ಈ ಮಾತನ್ನು ಅಹಂ ಕೇಂದ್ರಿತವಾಗಿ ತೆಗೆದುಕೊಳ್ಳದೆ ಆಹ್ವಾನವಾಗಿ ಸಾಧನಾ ಕೇಂದ್ರಿತವಾಗಿ, ಪರೀಕ್ಷಾರ್ಥವಾಗಿ ತೆಗೆದುಕೊಂಡರೆ ನಮ್ಮ ಮನಸ್ಸು ಕೊಂಚವಾದರೂ ವಿಕಸಿತವಾಗುತ್ತದೆ.
ಡಾ ಗುರುಪಾದ ಮರಿಗುದ್ದಿ ಅವರು ಈ ಕೃತಿಯ ಮೂಲಕ ಕುವೆಂಪುರವರ ಅಂತಸ್ರೋತದ ಮೇಲೆ ಬೆಳಕು ಚೆಲ್ಲುತ್ತಾರೆ ಕನ್ನಡ, ಕುವೆಂಪು ಸಾಹಿತ್ಯಾಸಕ್ತರು ಮೇರು ಕವಿಯ ಅಪರೂಪದ ಒಳನೋಟಗಳಿಗಾಗಿ ಈ ಕೃತಿಯನ್ನು ಅವಶ್ಯವಾಗಿ ಓದಬಹುದು. ಕುವೆಂಪುರವರ ನೇರ ಸಂಪರ್ಕದಲ್ಲಿದ್ದು ಅವರ ಸಾಹಿತ್ಯವನ್ನು ವಿಶೇಷವಾಗಿ ಅಭ್ಯಸಿಸಿದ ಡಾ ಗುರುಪಾದ ಮರಿಗುದ್ದಿ ಅವರ ಈ ಕೃತಿಯನ್ನು ಹಿರಿಯ ಸಾಹಿತಿ ಸಿಪಿಕೆ ಕೃತಿ ಅವತಾರವೆಂದು ಕರೆದಿದ್ದಾರೆ.
ಕುಪ್ಪಳ್ಳಿಯ ಪುಟ್ಟಪ್ಪನವರಿಗೆ ವಿಶ್ವ ಮಾನವ ಕುವೆಂಪು ಏನೆಂದು ಗೊತ್ತಿತ್ತು.
“ಎಲ್ಲವೊಂದುಗೂಡಲೆಂದು ವಿಧಿಯ ಮನಸು
ಕಡೆದ ಕನಸು ಕಾವ್ಯ ಕಣಸೆ ಕಾಣ್; ಕುವೆಂಪು!
ಭಕ್ತಿಯಡಿಯ ಹುಡಿ-ಕುವೆಂಪು! ಗುರು ಹಸ್ತದ ಕಿಡಿ- ಕುವೆಂಪು!
ನುಡಿರಾಣಿಯ ಗುಡಿ-ಕುವೆಂಪು ! ಸಿರಿಗನ್ನಡ ಮುಡಿ ಕುವೆಂಪು!
ಇರ್ದುಮಿಲ್ಲದೀಕುವೆಂಪು!”
ಇಂಥ ಸಾಲು ಬರೆಯಲು ಎಂಥ ಧೀಮಂತಿಕೆ ಬೇಕು ಎಂದು ಯೋಚಿಸಿದಾಗ ಅಚ್ಚರಿಯಾಗುತ್ತದೆ. “ ನಾನು ರಾಮಕೃಷ್ಣ ಗೋತ್ರ ಸಂಭೂತ” ನೆಂದು ಹೇಳುತ್ತಿದ್ದ ಕುವೆಂಪು “ ವಜ್ರವನಾಗಿಸು ಈ ಇದ್ದಲಿನ ಚೂರನು ನಿನ್ನಡಿಯ ವಿದ್ಯುತ್ ಸ್ಪರ್ಶದಿಂದ, ಓ ಜಗದ್ಗುರುವೇ, ವಜ್ರಾವಾಯುಧವಾಗಿ ಇಂದ್ರಹಸ್ತವ ಸೇರಿ ಆಸುರೀ ದಮನದಲನಕೆ ನಿವೇದಿತವಾಗಲಿ!” ಎಂದು ಪ್ರಾರ್ಥಿಸುತ್ತಾರೆ.
©2024 Book Brahma Private Limited.