ಹಿರಿಯ ಲೇಖಕ, ವಿಮರ್ಶಕ- ಚಿಂತಕ ಬಸವರಾಜ ಕಲ್ಗುಡಿ ಅವರ ಸಂಸ್ಕೃತಿ, ಸಾಹಿತ್ಯ ಮತ್ತು ಸಂಶೋಧನಾ ಬರಹಗಳ ಸಂಕಲನವಿದು. ಇದರಲ್ಲಿ ಒಟ್ಟು ೩೫ ಲೇಖನಗಳಿವೆ. ಅವುಗಳನ್ನು ಐದು ಭಾಗಗಳಾಗಿ ವಿಂಗಡಿಸಲಾಗಿದೆ. ಮೈಮನದ ಮಾತು, ಕನ್ನಡ ಲೋಕ: ಆಧುನಿಕತೆಯ ವಿಭಿನ್ನ ಬಣ್ಣ, ಕನ್ನಡದ ಕಣ್ಮಣಿಗಳು, ಲೋಕಜ್ಞಾನ ಮತ್ತು ಕನ್ನಡ, ಕಾಲಜ್ಞಾನ.
ಬೆನ್ನುಡಿಯಲ್ಲಿ ಪುಸ್ತಕದ ಬಗ್ಗೆ ’ಸಾಹಿತ್ಯದ ಸಾತತ್ಯ, ಸಂಸ್ಕೃತಿಯ ವ್ಯಾಖ್ಯಾನ, ಸಾಮಾಜಿಕ ಪರಿಕರಗಳನ್ನು ಸಮಗ್ರವಾಗಿ ಬೇರೆ ಬೆರೆ ನೆಲೆಗಳಿಂದ ಶೋಧಿಸುವ ಕ್ರಮ ಕಲ್ಗುಡಿ ಅವರದು. ಶಾಸನ, ಸಂಶೋಧನೆ, ಜಾನಪದದ ವಿಶ್ಲೇಷಣೆ, ಹಳಗನ್ನಡ ಮತ್ತು ಆಧುನಿಕ ಕೃತಿಗಳ ಮುಖಾಮುಖಿ, ಸಿದ್ಧ, ನಾಥಪಂಥ, ಯೋಗಮಾರ್ಗ- ವಚನ, ಭಕ್ತಿ ಪರಂಪರೆ ಮುಂತಾದ ಚಳುವಳಿ-ಪರಂಪರೆಗಳನ್ನು ಪರಿಶೀಲಿಸುವ, ಪರಿವೀಕ್ಷಿಸುವ ಕ್ರಮ ಕನ್ನಡ ಸಂದರ್ಭದಲ್ಲಿ- ಅದರಲ್ಲಿಯೂ ವಿಮರ್ಶಾಲೋಕದಲ್ಲಿ ವಿಶಿಷ್ಟವಾದುದಾಗಿದೆ.
ಸುಮಾರು ಕಾಲು ಶತಮಾನದ ಅವಧಿಯಲ್ಲಿ ಪ್ರಕಟಗೊಂಡ ಇಲ್ಲಿಯ ಲೇಖನಗಳು ಕೇವಲ ವಸ್ತು, ವಿಷಯ, ಚಿಂತನೆಗಳ ಕಾರಣಕ್ಕೆ ಮಾತ್ರ ಅಪರೂಪದ್ದಾಗಿರದೆ, ಮಂಡಿಸುವ ಶೈಲಿ ಮತ್ತು ಆಲೋಚನಾ ಕ್ರಮಗಳ ಕಾರಣದಿಂದಲೂ ಮುಖ್ಯವಾಗಿವೆ. ಅದರಲ್ಲಿಯೂ ವಿಶೇಷವಾಗಿ ಭಾಷಾಶಾಸ್ತ್ರ, ಶಾಸನ ಅಧ್ಯಯನ, ಸಂಶೋಧನೆ, ಭಕ್ತಿ ಮತ್ತು ಜಾನಪದದಂಥ ವಿಚಾರಗಳನ್ನು ಕೇವಲ ತಾರ್ಕಿಕವಾಗಿಯಷ್ಟೇ ಅಲ್ಲ, ಅನುಭಾವಿಕ ನೆಲೆಯಲ್ಲಿಯೂ ಗ್ರಹಿಸುವ ರೀತಿ ವಿಶೇಷವಾದುದ್ದಾಗಿದೆ. ಇವು ಲೋಕಜ್ಞಾನಕ್ಕೂ ಹಿಡಿದ ಕನ್ನಡಿಯಾಗಿವೆ.’
©2024 Book Brahma Private Limited.