‘ಕಥಾ ಸಂಮಿತ’ ಲೇಖಕ ರಮೇಶ ಎಸ್. ಕತ್ತಿ ಅವರ ಸಂಶೋಧನಾ ಮಹಾಪ್ರಬಂಧ. ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಡಾ. ಪುರುಷೋತ್ತಮ ಬಿಳಿಮಲೆ, ‘ನದಿಗಳು ಹರಿಯುವ ಜಿಲ್ಲೆಯೆಂದು ಖ್ಯಾತಿ ಪಡೆದ ಬಿಜಾಪುರದ ಕತೆಗಾರರ ಮುಖ್ಯ ಧಾತುವೇ ‘ಬಡತನ’ ಎಂಬ ಅಂಶ ಇಲ್ಲಿ ಗಟ್ಟಿಯಾಗಿ ಪ್ರತಿಪಾದನೆಗೊಂಡಿದೆ. ಜೊತೆಗೆ, ಇಲ್ಲಿನ ಜನಗಳ ಕೌಟುಂಬಿಕ ಬಿಕ್ಕಟ್ಟುಗಳು ಮತ್ತು ಸ್ತ್ರೀಯರು ಹಾಗೂ ದಲಿತರ ಮೇಲಾಗುತ್ತಿರುವ ನಿರಂತರ ದೌರ್ಜನ್ಯಗಳಿಗೂ ಕತೆಗಾರರು ಧ್ವನಿಯಾಗಿದ್ದಾರೆ. ಒಂದು ನಿರ್ದಿಷ್ಟ ಪ್ರದೇಶದ ಲೇಖಕರನ್ನು ಆಯ್ದುಕೊಂಡು ಅಧ್ಯಯನ ನಡೆಸುವ ಪದ್ಧತಿ, ಕನ್ನಡದಲ್ಲಿ ಮೊದಲಿನಿಂದಲೂ ಇದೆ. ಹೈದರಾಬಾದ್ ಕರ್ನಾಟಕದ ಸಾಹಿತ್ಯ ಕರಾವಳಿಯ ಕಾವ್ಯ, ಮುಂಬಯಿ ರಂಗಭೂಮಿ ಹೀಗೆ ಅನೇಕ ಪ್ರಯತ್ನಗಳು ಯಶಸ್ವಿಯಾಗಿ ನಡೆದಿವೆ. ಇಂಥ ಪ್ರಯತ್ನಕ್ಕೆ ಪೂರಕವಾಗಿ ರಮೇಶ್ ಕತ್ತಿ ಅವರು 'ವಿಜಾಪುರ ಜಿಲ್ಲೆಯ ಸಣ್ಣಕತೆಗಳು' ಎಂಬ ವಿಷಯದ ಕುರಿತು ಇಲ್ಲಿ ಗಂಭೀರವಾಗಿ ಅಧ್ಯಯನ ನಡೆಸಿದ್ದಾರೆ. ಬಿಜಾಪುರ ಜಿಲ್ಲೆಯ ಸಣ್ಣಕತೆಗಾರರ ಕುರಿತು ಈವರೆಗೂ ಸಮಗ್ರ ಅಧ್ಯಯನ ನಡೆದಿಲ್ಲವೆಂದು ತೋರುತ್ತದೆ. ಅವರು ನವೋದಯದ ಕಾಲದ ಕತೆಗಳಿಂದ ಆರಂಭಿಸಿ ಇತ್ತೀಚಿನ ಕತೆಗಳವರೆಗೆ ದೊಡ್ಡ ಸಂಖ್ಯೆಯಲ್ಲಿ ಕತೆಗಾರರನ್ನು ಆಯ್ದುಕೊಂಡಿದ್ದಾರೆ. ಈ ಅರ್ಥದಲ್ಲಿ ಇದೊಂದು ಸಮೀಕ್ಷಾರೂಪದ ಅಧ್ಯಯನವೂ ಹೌದು. ರಮೇಶ್ ಕತ್ತಿ ಅವರು ಈ ಮಹಾಪ್ರಬಂಧದಲ್ಲಿ ಬಿಜಾಪುರ ಜಿಲ್ಲೆಯ ಎಲ್ಲ ಕತೆಗಾರರನ್ನು ಗುರುತಿಸಿ ಅವರ ಕತೆಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಇಂಥ ಕೆಲಸದ ಹಿಂದಿನ ಶ್ರಮವನ್ನು ನಾನು ಗುರುತಿಸಬಲ್ಲೆ. ಈ ಶ್ರಮವು ಮುಖ್ಯವಾಗಿ ಕತೆಗಾರರನ್ನು ಗುರುತಿಸುವುದು, ಅವರ ಕತೆಗಳನ್ನು ಸಂಗ್ರಹಿಸುವುದು ಮತ್ತು ಆ ಕತೆಗಳನ್ನು ತಾಳ್ಮೆಯಿಂದ ಓದುವುದಕ್ಕೆ ಸಂಬಂಧಿಸಿದೆ. ಈ ಕೆಲಸವನ್ನು ಸಂಶೋಧಕರು ತುಂಬ ಅಚ್ಚುಕಟ್ಟಾಗಿ ಮಾಡಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.