ಧಾರ್ಮಿಕ ಕ್ಷೇತ್ರಗಳ ಚರಿತ್ರೆಯನ್ನು ಅವಲೋಕಿಸಿದರೆ ಧಾರ್ಮಿಕತೆಯ ಮುಖ ಹೇಗೆ ಇದ್ದರೂ ಜೊತೆಗೆ ಉಪಯುಕ್ತ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆ ನಡೆದಿರುವುದು ಕಾಣಬರುತ್ತದೆ. ಅಧ್ಯಯನಕಾರರು ಅವನ್ನು ಅಲ್ಲಗಳೆದರೆ ಸಾಂಸ್ಕೃತಿಕ ಲೋಕಕ್ಕೆ ಅಪಾರ ನಷ್ಟವಾಗುವುದು ಖಚಿತ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ ಸಾಂಸ್ಕೃತಿಕ ಕಥನವನ್ನು ಕುರಿತ ಅಧ್ಯಯನ ಅತ್ಯಂತ ಉಪಯುಕ್ತವಾಗಿದೆ. ಲೇಖಕರು ಸಾಹಿತ್ಯ ಮತ್ತು ಸಂಸ್ಕೃತಿಕ ಸಂವರ್ಧನೆಯಲ್ಲಿ ಧಾರ್ಮಿಕ ಕ್ಷೇತ್ರವೊಂದು ನಿರ್ವಹಿಸಿದ ಕಾರ್ಯವನ್ನು ಸಮರ್ಥವಾಗಿ ಗುರುತಿಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಒಟ್ಟಾರೆ ಈ ಅಧ್ಯಯನದಲ್ಲಿ ಕ್ಷೇತ್ರದ ಐತಿಹಾಸಿಕ, ಪೌರಾಣಿಕ ಮತ್ತು ಸಾಂಸ್ಕೃತಿಕ ವಿವರಗಳನ್ನು ಕೂಲಂಕುಷವಾಗಿ ಅವಲೋಕಿಸಲಾಗಿದೆ ಹಾಗೂ ಆಯ್ಕೆಮಾಡಿಕೊಂಡ ವಿಷಯವನ್ನು ಲೇಖಕಿ ಗೊಂದಲಕ್ಕೆಡೆಯಿಲ್ಲದಂಚೆ ಸ್ಪಷ್ಟವಾಗಿ ನಿರೂಪಿಸಿದ್ದಾರೆ. ಮಾಹಿತಿಗಳನ್ನುು ಉಪಲಬ್ಧ ಆಧಾರಗಳ ಮೇಲೆ ಕಲೆಹಾಕಿ ಕ್ರಮಬದ್ಧವಾಗಿ ಸಂಯೋಜಿಸಲಾಗಿದೆ. ಅಧ್ಯಯನದ ಹೃದಯ ಭಾಗದಂತಿರುವ ಮಂಜೂಷ ವಸ್ತುಸಂಗ್ರಹಾಲಯ, ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ, ಯಕ್ಷಗಾನ ಮತ್ತು ಸಂಸ್ಕೃತಿ ಪ್ರಸಾರದ ವಿಭಿನ್ನ ಶಾಖೆಗಳು, ಜಾನಪದ ಸಂಸ್ಕೃತಿಯ ಸಂರಕ್ಷಣೆ ಹಾಗೂ ಪ್ರಸಾರದಲ್ಲಿ ವಹಿಸಿದ ಪಾತ್ರವನ್ನು ಉದ್ದೇಶಿತ ವಿಷಯಕ್ಕೆ ಪೂರಕವಾಗಿ ಬಳಸಿಕೊಳ್ಳಲಾಗಿದೆ. ಧಾರ್ಮಿಕ ಶ್ರದ್ಧಾಕೇಂದ್ರವೊಂದನ್ನು ನೆಲೆಯಾಗಿಸಿಕೊಂಡು ಮಾಡಿದ ವಿರಳ ಅಧ್ಯಯನಗಳ ಸಾಲಿನಲ್ಲಿ ಈ ಕೃತಿಹೆ ತನ್ನದೇ ಆದ ಗುರುತರ ಸ್ಥಾನವಿದೆ.
©2024 Book Brahma Private Limited.