ಜಾಜಿ ದೇವೇಂದ್ರಪ್ಪ ಎಂದೇ ಖ್ಯಾತರಾಗಿರುವ ಕವಿ, ವಿಮರ್ಶಕ ಡಾ.ದೇವೇಂದ್ರಪ್ಪ ಜೆ ಅವರು ಮೂಲತಃ ಬಳ್ಳಾರಿಯವರು. ತಂದೆ ಜಾಜಿ ಚೆನ್ನಬಸಪ್ಪ, ತಾಯಿ ನೀಲಮ್ಮ. ಸದ್ಯ ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಜಾಜಿ ದೇವೇಂದ್ರಪ್ಪನವರು, ಸಾಹಿತ್ಯದ ಹಲವು ವಿಭಾಗಗಳಲ್ಲಿ ಕೃಷಿ ಮಾಡಿದ್ದಾರೆ. ಗುಲ್ಪರ್ಗ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಕನ್ನಡದಲ್ಲಿ ಎಂ.ಎ ಪದವಿ ಪಡೆದಿರುವ ಅವರು ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಆಂಧ್ರ- ಕರ್ನಾಟಕ ಗಡಿಭಾಗದ ಸ್ಥಳನಾಮಗಳು ಎಂಬ ವಿಷಯದಡಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ದೇವೇಂದ್ರಪ್ಪನವರು ಹಳಗನ್ನಡ, ಮಧ್ಯಕಾಲೀನ ಕನ್ನಡ, ಹೊಸಗನ್ನಡ ಸಾಹಿತ್ಯ, ಸಾಂಸ್ಕೃತಿಕ ಇತಿಹಾಸ, ಭಾಷಾ ಅಧ್ಯಯನ, ಅನುವಾದ ಮುಂತಾದ ವಿಷಯಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ.
ಬಾನ ಬೆಡಗು(ಕವನ ಸಂಕಲನ), ವಿಜಲುಗಳು(ಕವನ ಸಂಕಲನ), ಆಂಧ್ರ ಕರ್ನಾಟಕ ಗಡಿ ಪ್ರದೇಶದ ಸ್ಥಳನಾಮಗಳು-(ಸಂಶೋಧನಾ ಕೃತಿ) ಶ್ರೀಶೈಲ ಶಾಸನ ಸಮೀಕ್ಷೆ - ಅನುವಾದ (ತೆಲುಗಿನಿಂದ), ಕಾವ್ಯ ಮಂದಾರ - (ಕವನ ಸಂಕಲನ) ಆಂಧ್ರರು ಚಿತ್ರಿಸಿದ ಬಸವಣ್ಣ - ಅನುವಾದ (ತೆಲುಗಿನಿಂದ), ಪ್ರಸ್ತಾಪನ- ಸಂಶೋಧನಾ ಲೇಖನಗಳು ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರ ಸಾಹಿತ್ಯ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದ.ರಾ.ಬೇಂದ್ರೆ ಗ್ರಂಥ ಬಹುಮಾನ, ಸ್ಕಂದ ಸಿರಿ ಪ್ರಶಸ್ತಿ, ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ.