ಕನ್ನಡ ಭಾಷೆ, ಕರ್ನಾಟಕ ಇತಿಹಾಸ ಹಾಗೂ ಭಾರತೀಯ ಸಂಸ್ಕೃತಿಯ ಸಂಶೋಧಕರಾದ ಶಂ.ಬಾ. ಜೋಶಿ ಅವರು ಕನ್ನಡ ಸಂಶೋಧನಾ ಕ್ಷೇತ್ರದ ಬಲುದೊಡ್ಡ ಹೆಸರು. 1896ರ ಜನೇವರಿ 4ರಂದು ಗುರ್ಲಹೊಸೂರಿನಲ್ಲಿ ಜನಿಸಿದರು. ತಂದೆ ಬಾಳದೀಕ್ಷಿತ ಜೋಶಿ ಮತ್ತು ತಾಯಿ ಉಮಾಬಾಯಿ. ವಿದ್ಯಾಭ್ಯಾಸ ಗುರ್ಲಹೊಸೂರು, ಬೊಮ್ಮನಹಳ್ಳಿ, ಪುಣೆ ಹಾಗೂ ಧಾರವಾಡಗಳಲ್ಲಿ ಆಯಿತು. 1916ರಲ್ಲಿ ಧಾರವಾಡದ ಸರ್ಕಾರಿ ತರಬೇತಿ ಕಾಲೇಜು ಸೇರಿ ಶಿಕ್ಷಣ ತರಬೇತಿ ಪಡೆದರು.
ಚಿಕ್ಕೋಡಿಯಲ್ಲಿ ಶಾಲಾ ಶಿಕ್ಷಕರಾಗಿ (1926-27) ಸೇವೆ ಸಲ್ಲಿಸಿದ ಮೇಲೆ 1928ರಲ್ಲಿ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಿದ ಅವರು 1946ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕರ್ನಾಟಕ ವೃತ್ತ, ಧನಂಜಯ, ಕರ್ಮವೀರ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ (1981) ಅಧ್ಯಕ್ಷತೆ ವಹಿಸಿದ್ದರು.
ಕರ್ಣಾಟಕ ಸಂಸ್ಕೃತಿಯ ಪೂರ್ವಪೀಠಿಕೆ ಎಂಬ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1970), ಮೈಸೂರು ವಿಶ್ವವಿದ್ಯಾನಿಲಯವು ಡಿಲಿಟ್ (1971), ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (1967) ದೊರತಿದ್ದವು.
ಶಂಕರ ಬಾಳದೀಕ್ಷಿತ ಜೋಶಿಯವರು 1991 ರ ಸೆಪ್ಟೆಂಬರ್ 28 ರಂದು ಧಾರವಾಡದಲ್ಲಿ ನಿಧನರಾದರು.
ಸಂಸ್ಕೃತ, ಕನ್ನಡ, ಮರಾಠಿ, ಇಂಗ್ಲಿಷ್ ಭಾಷೆಗಳನ್ನು ಚೆನ್ನಾಗಿಬಲ್ಲ ಶಂ.ಬಾ. ಜೋಶಿ ಅವರು ಮರಾಠಿಯಲ್ಲಿಯೂ ಕೆಲವು ಕೃತಿಗಳನ್ನು ಬರೆದಿದ್ದಾರೆ. ಶಂ.ಬಾ. ಜೋಶಿ ಅವರ ಪ್ರಮುಖ ಕೃತಿಗಳು ಹೀಗಿವೆ :
ಕಣ್ಮರೆಯಾದ ಕನ್ನಡ, ಕರ್ಣಾಟಕ ಸಂಸ್ಕೃತಿಯ ಪೂರ್ವಪೀಠಿಕೆ, ಕನ್ನಡ ನುಡಿಯ ಜೀವಾಳ, ಕನ್ನಡ ಸಾಹಿತ್ಯ ಅಭಿವೃದ್ಧಿ, ಅನ್ನವಿದ್ಯೆ, ಯಕ್ಷಪ್ರಶ್ನೆ, ಹಾಲುಮತದರ್ಶನ, ನಾಗಪ್ರತಿಮಾ ವಿಚಾರ, ಕರ್ಣನ ಮೂರು ಚಿತ್ರಗಳು, ಕಂನಾಡ ಕಥೆ, ಕನ್ನಡದ ನೆಲೆ ಇತ್ಯಾದಿ.