ಲೇಖಕ ಮಲ್ಲಿನಾಥ ಶಿ. ತಳವಾರ ಅವರು ಮೂಲತಃ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರು (ಜನನ: 11-07-1979) ಗ್ರಾಮದವರು. ಗುಲಬರ್ಗಾ ವಿ.ವಿ.ಯಿಂದ ಎಂ.ಎ. ಬಿ.ಇಡಿ, ಹಾಗೂ ಹಂಪಿಯ ಕನ್ನಡ ವಿ.ವಿ.ಯಿಂದ ಪಿಎಚ್ ಡಿ (ಕಾರಂತರ ಕಾದಂಬರಿಗಳ ಸ್ತ್ರೀಪ್ರಪಂಚ) ಪದವೀಧರರು.
ಚಿತ್ತಾಪುರದ ಶ್ರೀ ಗಂಗಾ ಪರಮೇಶ್ವರಿ ಡಿ.ಎಡ್ ವಿದ್ಯಾಲಯದಲ್ಲಿ ಉಪನ್ಯಾಸಕರು. ನಂತರ 2009 ರಿಂದ ಕಲಬುರಗಿಯ ನೂತನ ಪದವಿ ವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರು. ರಾವೂರು ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಚಿತ್ತಾಪುರ ತಾಲೂಕು ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಚಿತ್ತಾಪುರ ತಾಲೂಕು ಘಟಕ ಅಧ್ಯಕ್ಷರು, ಕನ್ನಡ ನಾಡು ಲೆೀಖಕರ ಮತ್ತು ಓದುಗರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಕೃತಿಗಳು: ದರ್ಶನ (ಶರಣ ಸಂಚಿಕೆ, ಸಂಪಾದನೆ), ಪ್ರತಿಬಿಂಬ (ಕವನ ಸಂಕಲನ), ಕಾರಂತರ ಸ್ತ್ರೀ ಪ್ರಪಂಚ (ಸಂಶೋಧನಾ ಪ್ರಬಂಧ), ಸಣ್ಣ ಕತೆಗಳು, ರೂಪಕ: ಒಂದು ಸಂಶೋಧನಾ ಹುತ್ತ, ಒಂದು ರೈಲು ಪ್ರಯಾಣದ ಸುತ್ತ (ಲಲಿತ ಪ್ರಬಂಧ), ಕಾರಂತರ ಲೋಕ (ಕಿರು ಹೊತ್ತಗೆ), ಪ್ರೇಮತರಂಗ, ಭಾವತರಂಗ, ಧರ್ಮತರಂಗ, ಮುತ್ತಿನ ಸಂಕೋಲೆ (ಕಥಾ ಸಂಕಲನ), ವಚನ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ, ಪ್ರೀತಿ ಇಲ್ಲದೇ ಬದುಕಿದವರ್‍ಯಾರು (ಕವನ ಸಂಕಲನ), ಮಕ್ಕಳ ಸಾಹಿತ್ಯಕ್ಕೆ ಕಾರಂತರ ಕೊಡುಗೆ. ಆಕಾಶವಾಣಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕವಿಗೋಷ್ಠಿ, ವಿಚಾರ ಸಂಕಿರಣ, ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಚಿಂತನೆಗಳನ್ನು ಮಂಡಿಸಿದ್ದಾರೆ. ವಿವಿಧ ಸ್ಮರಣ ಸಂಚಿಕೆ ಹಾಗೂ ಅಭಿನಂದನಾ ಗ್ರಂಥಗಳಲ್ಲಿ ಇವರ ಕವಿತೆಗಳು, ಲೇಖನಗಳು ಪ್ರಕಟವಾಗಿವೆ. ಗಜಲ್, ಹೈಕು ಬರೆಯುವ ಹವ್ಯಾಸ ಸೇರಿದಂತೆ ರಂಗಭೂಮಿಯ ಆಸಕ್ತಿಯೂ ಇದೆ.
ಪ್ರಶಸ್ತಿ-ಗೌರವಗಳು: ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದಿಂದ ಸಾಹಿತ್ಯ ರತ್ನ ಪ್ರಶಸ್ತಿ (2015), ಸೇಡಂ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ (2016) ಕಲಬುರಗಿಯ ವಿಶ್ವಜ್ಯೋತಿ ಪ್ರತಿಷ್ಠಾನದಿಂದ ಲಿಂ. ರೇವಣಸಿದ್ಧಯ್ಯ ರುದ್ರಸ್ವಾಮಿ ಮಠ ಸ್ಮಾರಕ ಸಾಹಿತ್ಯ ಪ್ರಶಸ್ತಿ (,2017), ಶ್ರೀ ಶಿವಕುಮಾರ ಸ್ವಾಮೀಜಿ ಅವರ 111ನೇ ಹುಟ್ಟುಹಬ್ಬ ಅಂಗವಾಗಿ ಚಿತ್ತಾಪುರದ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯಿಂದ ಸಿದ್ಧ ಸಾಧಕ ಪ್ರಶಸ್ತಿ (2018), ಡಾ. ಮಲ್ಲಿನಾಥ ಎಸ್. ತಳವಾರ ಅವರ ಸಮಗ್ರ ಸಾಹಿತ್ಯ -2020 ಕುರಿತು ಗುಲಬರ್ಗಾ ವಿ.ವಿ.ಗೆ ಸಂಪ್ರಬಂಧ ಸಲ್ಲಿಕೆಯಾಗಿದೆ.
ಗಾಲಿಬ್ ಸ್ಮೃತಿ, ಮಲ್ಲಿಗೆ ಸಿಂಚನ ಎರಡು ಇವರ ಗಜಲ್ ಸಂಕಲನಗಳು