ಕನ್ನಡ ಸಾಹಿತ್ಯ ಚರಿತ್ರೆಯ ಮೂಲಕ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾದ ರಂಗನಾಥ ಶ್ರೀನಿವಾಸ ಮುಗಳಿ ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರು. 1906ರ ಜುಲೈ 15ರಂದು ಜನಿಸಿದರು. ತಂದೆ ಶ್ರೀನಿವಾಸರಾವ್ ಮತ್ತು ತಾಯಿ ಕಮಲಕ್ಕ. ಬಾಗಲಕೋಟೆ, ಬಿಜಾಪುರಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. (1928) ಎಂ.ಎ. (1930) ಮಾಡಿದರು. 1932ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಶಿಕ್ಷಕರಾಗಿ ಸೇರಿದರು. 1933ರಲ್ಲಿ ಸಾಂಗ್ಲಿಯ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ 1966ರಲ್ಲಿ ನಿವೃತ್ತರಾದರು. ಕೆಲವು ಕಾಲ ಸರಕಾರದ ಸಾಹಿತ್ಯ ಸಂಸ್ಕೃತಿ ಇಲಾಖೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅನಂತರ ಬೆಂಗಳೂರಿನಲ್ಲಿ 1967-70ರ ಅವಧಿಯಲ್ಲಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಮುಗಳಿಯವರು 1940-43ರಲ್ಲಿ ಜೀವನ ಪತ್ರಿಕೆಯ ಸಂಪಾದಕರಾಗಿ ಸೇವೆಸಲ್ಲಿಸಿದರು.
ಕರ್ನಾಟಕದ ಗಡಿನಾಡಿನ ಕನ್ನಡ ದೀಪ, ಕನ್ನಡದ ಪಾರಿಜಾತ ಎಂದು ಅವರಿಗೆ ಬಿರುದು ನೀಡಲಾಗಿತ್ತು. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ (1956) ಇವರ ಕನ್ನಡ ಸಾಹಿತ್ಯ ಚರಿತ್ರೆ ಗ್ರಂಥಕ್ಕೆ ದೊರೆಯಿತು. ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ (1955) ದಲ್ಲಿ ವಿಮರ್ಶಾ ಗೋಷ್ಠಿಯ ಅಧ್ಯಕ್ಷತೆ, 1957ರಲ್ಲಿ ಧಾರವಾಡದಲ್ಲಿ 19ನೇ ಶತಮಾನದ ಸಾಹಿತ್ಯ ವಿಮರ್ಶೆಯ ಗೋಷ್ಠಿಯ ಅಧ್ಯಕ್ಷತೆಗಳನ್ನು ವಹಿಸಿದ್ದರು. ತುಮಕೂರು ಸಿದ್ಧಗಂಗಾ ಕ್ಷೇತ್ರದಲ್ಲಿ ನಡೆದ 44ನೇ ಕನ್ನಡ ಸಾಹಿತ್ಯ ಸಮ್ಮೇಳನ (1963) ಅಧ್ಯಕ್ಷತೆ ವಹಿಸಿದ್ದರು. ರಂ.ಶ್ರೀ ಮುಗಳಿ ಅವರು 1993ರ ಫೆಬ್ರುವರಿ 20ರಂದು ಬೆಂಗಳೂರಿನಲ್ಲಿ ನಿಧನರಾದರು.
ಪ್ರಮುಖ ಕೃತಿಗಳು:
ಕನ್ನಡ ಸಾಹಿತ್ಯ ಚರಿತ್ರೆ, ಹೆರಿಟೇಜ್ ಆಫ್ ಕರ್ನಾಟಕ (ಇಂಗ್ಲಿಷ್), ಕನ್ನಡ ಕೃತಿರತ್ನ, ಕನ್ನಡ ಕಾವ್ಯ ಸಂಚಯ, ಅನ್ನ (ಕಾದಂಬರಿ), ಸಾಹಿತ್ಯ ವಿಮರ್ಶೆಯ ಮಾರ್ಗದರ್ಶನ ಸೂತ್ರಗಳು (ವಿಮರ್ಶೆ)