ಕಾವ್ಯಾತ್ಮಕ ಗದ್ಯ ಬರವಣಿಗೆ ಈ ಪುಸ್ತಕದ ಗಮನ ಸೆಳೆಯುವ ಅಂಶ. ಸರಾಗವಾಗಿ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿರುವ ಈ ಕೃತಿಯು ಅದೇ ಕಾರಣಕ್ಕಾಗಿ ಮನಸೂರೆಗೊಳ್ಳುತ್ತದೆ. ಆಧ್ಯಾತ್ಮದ ನಿಗೂಢ ಲೋಕವನ್ನು ಅನಾವರಣ ಮಾಡುವ ಬಯಕೆ ಹೊಂದಿದಂತೆ ಅನ್ನಿಸುವ ಈ ಪುಸ್ತಕವು ಅದನ್ನು ಯಶಸ್ವಿಯಾಗಿಯೇ ಪೂರೈಸಿದೆ. ಅನುಭವದ ಅರಿವನ್ನು ದಾಖಲಿಸುವ ವಿಭಿನ್ನ ಮತ್ತು ವಿಶಿಷ್ಟ ಪ್ರಯತ್ನ ಎದ್ದು ಕಾಣುತ್ತದೆ. ಈ ಪುಸ್ತಕದಲ್ಲಿ ಇಬ್ಬರು ‘ಕಥಾನಾಯಕ’ರ ಪ್ರಸ್ತಾಪ ಬರುತ್ತದೆ. ಹಾಗೆ ನೋಡಿದರೆ ಇದು ಇಬ್ಬರು ವ್ಯಕ್ತಿಗಳನ್ನು ಕುರಿತ ಪುಸ್ತಕ. ಆದರೆ, ಅದು ಜೀವನ ಚರಿತ್ರೆಯಲ್ಲ. ಎರಡು ವ್ಯಕ್ತಿಗಳ ನಡುವಿನ ಸಂಬಂಧವನ್ನು ಸೂಕ್ಷ್ಮ ನೆಲೆಯಲ್ಲಿ ಬಿಚ್ಚಿಡುತ್ತ ಹೋಗುತ್ತದೆ. ಸ್ನೇಹ ಎನ್ನುವುದು ಜಾತಿ-ಮತ- ನಂಬಿಕೆಗಳಾಚೆಗೂ ಚಾಚುವಂತಹದು. ಮೇರೆಗಳನ್ನೂ ಮೀರುವ ‘ನೆಟ್ಟಾರು ರಾಮಚಂದ್ರಭಟ್ಟ’ ಹಾಗೂ ‘ಇಸ್ಮಾಯಿಲ್ ಕುಂಞಪ್ಪ’ರ ನಡುವಿನ ಸಂಬಂಧವನ್ನು ಸ್ನೇಹ ಎಂಬ ಚೌಕಟ್ಟಿಗೆ ಸೀಮಿತ ಮಾಡಲು ಆಗುವುದಿಲ್ಲ. ಚೌಕಟ್ಟುಗಳನ್ನು ಹಾಕುತ್ತಲೇ ಅದನ್ನು ಆಯಾಚಿತವಾಗಿ ಮೀರುವ ಪ್ರಯತ್ನ ಪುಸ್ತಕದುದ್ದಕ್ಕೂ ಇದೆ. ವಿಶಿಷ್ಟ ಅನುಭವದ ಲೋಕವನ್ನು ಸೊಗಸಾಗಿ ದಾಖಲಿಸಿರುವ ಈ ಪುಸ್ತಕವು ಓದಿನ ಸುಖವನ್ನು ಕೊಡುವ ಅಪರೂಪದ ಗ್ರಂಥ. ಜಿಜ್ಞಾಸೆ, ಮಾತು- ಚರ್ಚೆಗಳು ಒಣ ವಿವರಗಳಾಗಿರದೆ ಸಾಹಿತ್ಯದ ಸ್ಪರ್ಶದೊಂದಿಗೆ ಓದುಗನನ್ನು ಆವರಿಸಿಕೊಳ್ಳುತ್ತ ಹೋಗುತ್ತದೆ. ಅದು ಮೋಹಕತೆ ಆಗದಂತೆ ವಹಿಸಿರುವ ಎಚ್ಚರವೂ ಲೇಖಕರಿಗೆ ಇರುವುದು ಗಮನಾರ್ಹ ಅಂಶ. ಈ ಪುಸ್ತಕದ ಬರವಣಿಗೆಯು ಪತ್ರಿಕೆಯಲ್ಲಿ ಸರಣಿ ರೂಪದಲ್ಲಿ ಪ್ರಕಟವಾಗಿದ್ದವು. ಹಾಗಂತ ಈ ಪುಸ್ತಕವನ್ನು ಅಂಕಣ ಪ್ರಕಾರಕ್ಕೆ ಸೀಮಿತಗೊಳಿಸುವುದು ಆಗುವುದಿಲ್ಲ. ಅನುಭವದ ಲೋಕವನ್ನು ಅಕ್ಷರಗಳ ಮೂಲಕ ದಾಖಲಿಸಿಟ್ಟ ಪರಿ ಮೆಚ್ಚುಗೆಗೆ ಪಾತ್ರವಾಗುವಷ್ಟು ಸೊಗಸಾಗಿದೆ. ಸೊಗಸಾದ ವಸ್ತುವಿನ ಆಯ್ಕೆ ಹಾಗೂ ಅಷ್ಟೇ ಸೊಗಸಾದ ನಿರೂಪಣೆಯ ಮೂಲಕ ಓದಿನ ಸೊಗಸುಗಾರಿಕೆಯನ್ನು ಹೆಚ್ಚಿಸುತ್ತದೆ. ಆದರೆ, ಓದಿದ ನಂತರ ಗಾಢವಾದ ಅನುಭವಲೋಕವನ್ನು ಸ್ಪರ್ಶಿಸಿದ ಅನುಭವ ನಮ್ಮದಾಗಿರುತ್ತದೆ. ಮತ್ತೆ ಮತ್ತೆ ಓದಬೇಕು ಎನ್ನಿಸುವ ಆದರೆ ‘ಖಾಲಿತನ’ವನ್ನು ಉಳಿಸಿಬಿಡುವ ರೀತಿ ಅಚ್ಚರಿ ಮೂಡಿಸುವಂತಿದೆ. ಈ ಪುಸ್ತಕದ ಓದನ್ನು ಯಾವುದೇ ಪುಟದಿಂದಲಾದರೂ ಆರಂಭಿಸಬಹುದು. ಬಿಡಿ ಬಿಡಿ ಅನುಭವವು ಮಾತುಕತೆ- ಪ್ರಶ್ನೋತ್ತರ- ಚರ್ಚೆಗಳ ಸ್ವರೂಪದಲ್ಲಿ ಇದೆ. ಹಾಗೆಯೇ ಅದಕ್ಕೊಂದು ಸಾತತ್ಯವೂ ಇದೆ. ಕಥೆಯ ಹಾಗೆ ಬೆಳೆಯುತ್ತ ಹೋಗುವ ಗುಣವೂ ಇರುವುದು ಮೆಚ್ಚುಗೆಗೆ ಪಾತ್ರವಾಗುವ ಅಂಶ.
©2024 Book Brahma Private Limited.