‘ನಾ ರಾಜಸ್ಥಾನದಲ್ಲಿ’ ಕೃತಿಯು ಕೃಷ್ಣಾನಂದ ಕಾಮತ್ ಅವರು ರಾಜಸ್ಥಾನ ಪ್ರದೇಶ ಪರಿಚಯ ಕುರಿತ ಅನುಭವ ಕಥನವೂ ಆಗಿದೆ. ಕೃತಿಗೆ ಕೃಷ್ಣಾನಂದ ಕಾಮತ್ ಅವರು ಹೀಗೆ ಪ್ರಸ್ತಾವನೆ ನೀಡಿದ್ದಾರೆ : ರಾಜಸ್ಥಾನದಲ್ಲಿ ಮೂರು ವರ್ಷಗಳ ವಾಸ್ತವ್ಯ ಅನೇಕ ಕಾರಣಗಳಿಗಾಗಿ ಚಿರಸ್ಮರಣೀಯವಾಗಿದೆ. ಮರುಭೂಮಿ, ದೇಶದಲ್ಲಿಯೇ ಹಿಂದುಳಿದ ರಾಜ್ಯಗಳಲ್ಲಿ ಇದು ಒಂದು ಎಂದು ತಿಳಿದುಕೊಂಡು ಹೋದವ ಕಂಡದ್ದು ಬೇರೆಯೇ. ನೀರಿಲ್ಲದ ಮರಭೂಮಿಯಲ್ಲಿಯೂ ಬೆನ್ನು ಮುರಿದು ದುಡಿದರೆ ದೇಶದ ರಾಜಧಾನಿಗೆ ಸಾಲುವಷ್ಟು ಕಾಯಿಪಲ್ಯ, ಬಂಗಾಲಿಗಳಿಗೆ ಬೇಕಾಗುವಷ್ಟು ಮೀನು ಪ್ರತಿದಿನವೂ ನೀರಿನ ಮೂಲಕವೇ ಕಳಿಸಬಹುದು ಎಂದು ಅಲ್ಲಿ ಹೋದ ಮೇಲೆಯೇ ಗೊತ್ತಾಯಿತು. ಅಲ್ಲಿಯ ಬಹುಸಂಖ್ಯಾತರು ನಿರಕ್ಷರಿಗಳಾದರೂ ಮನೋವೈಶಾಲ್ಯತೆಯುಳ್ಳವರು. ತಾವು ಸುಶಿಕ್ಷಿತರು : ಸುಸಂಸ್ಕೃತರು ಎಂದು ನಂಬಿದ ಇತರ ಪ್ರದೇಶದ ಜನರಿಗಿಂತ ಆದರಾತಿಥ್ಯ-ವಿಶ್ವಾಸ, ಸಹೃದಯತೆಗಳಲ್ಲಿ ಮುಂದುವರೆದವರು! ಎಂಬುದನ್ನು ಕಂಡುಕೊಂಡಾಗ ವಿಸ್ಮಯವಾಯಿತು. ನೌಕರಿಗಳಲ್ಲಿ ನಂಬಿಗೆಯಿಡದೇ ವ್ಯಾಪಾರದಲ್ಲಿ ಮನಸ್ಸು ಹಾಕಿದ ರಾಜಸ್ಥಾನಿಗಳು ದೇಶದ ತುಂಬ ಹರಡಿ ಹೋದಾಗ, ನೆರೆರಾಜ್ಯಗಳ ಸುಶಿಕ್ಷಿತರು ಗುಂಪು ಗುಂಪಾಗಿ ಒಂದು ಈ ನೆಲದಲ್ಲಿ ಬೇರು ಬಿಡುತ್ತಿದ್ದುದನ್ನು ಕಾಣುವಂತಾಯಿತು. ಮೈಮುರಿದು ದುಡಿದರೆ ಯಾವ ಕ್ಷೇತ್ರದಲ್ಲೂ ಪಾಶ್ಚಾತ್ಯರನ್ನು ಸರಿಗಟ್ಟಬಹುದೆಂದು ಆತ್ಮವಿಶ್ವಾಸ ಇಟ್ಟುಕೊಂಡವನಿಗೆ ನಿಜವಾದ ಭಾರತದ ದರ್ಶನವಾದದ್ದು ರಾಜಸ್ಥಾನದಲ್ಲಿಯೇ. ಶಿಕ್ಷಕನಾಗಿ ಆದರ್ಶವೊಂದನ್ನು ಸಾಧಿಸಬೇಕೆಂದು 'ಹವಾ ಮಹಾಲಿನಷ್ಟು’ ಎತ್ತರವಾಗಿ ಕಟ್ಟಿದ ಕನಸು ಕುಸಿದದ್ದು ಅಲ್ಲಿಯೇ. ಆದ್ದರಿಂದ ಇಂದು ರಾಜರಿಲ್ಲದ ರಾಜಸ್ಥಾನದ ಪರಿಚಯದ ಜೊತೆಗೆ ನನ್ನ ಕನಸು, ಯತ್ನ, ನಿರಾಶೆ, ಪರಾಭವಗಳನ್ನು ಮೂಡಿಸಲು ಯತ್ನಿಸಿದ್ದೇನೆ. ಅಲ್ಲಿಯ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಗ್ರಂಥಗಳು ಉಪಲಬ್ಧವಿರುವುದರಿಂದ ಅಲ್ಲಿ ಅವಕ್ಕೆ ಪ್ರಾಶಸ್ಥ್ಯ ಕೊಟ್ಟಿಲ್ಲ’ ಎಂದಿದ್ದಾರೆ.
©2024 Book Brahma Private Limited.