‘ಬಿದಿರು ನೀನ್ಯಾರಿಗಲ್ಲದವಳು’ ಕೃತಿಯು ಲೇಖಕ ವೀರಣ್ಣ ಕಮ್ಮಾರ ಅವರು ನಿರೂಪಿಸಿರುವ ಮೋಟಮ್ಮ ಅವರ ಆತ್ಮಕಥನವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಎಸ್.ಎಂ.ಕೃಷ್ಣ ಅವರು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮ ಪಂಚಾಯಿತಿಯ ಕೆಸವೊಳಲು ಎಂಬ ಸಣ್ಣ ಗ್ರಾಮದಿಂದ ಬಂದ ಮೋಟಮ್ಮನವರು ರಾಜ್ಯ ಮತ್ತು ರಾಷ್ಟ್ರ ರಾಜಧಾನಿಗಳಲ್ಲೂ ತಮ್ಮ ಸಾಧನೆಯ ಮುದ್ರೆ ಒತ್ತಿರುವುದು ಸಾಮಾನ್ಯ ಸಂಗತಿ ಅಲ್ಲ. ಪಕ್ಷದ ತಳಮಟ್ಟದಿಂದ ಬಂದು ಮಂತ್ರಿಯಾಗಿ, ವಿರೋಧ ಪಕ್ಷದ ನಾಯಕಿಯಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕಾರಣಿ ಸಮಿತಿಯ ಸದಸ್ಯರಾಗಿ ಪಕ್ಷದ ಎಲ್ಲಾ ಹಿರಿಯರ ಮನಸ್ಸು ಗೆದ್ದ ಗಟ್ಟಿಗಿತ್ತಿ, ರಾಜಕೀಯ ಸ್ಥಾನಮಾನಗಳ ಏರಿಳಿತವಾದರೂ ನಂಬಿದ ತತ್ವ - ಸಿದ್ಧಾಂತವನ್ನು ಮರೆಯದ ಪ್ರಬುದ್ಧ ರಾಜಕಾರಣಿ. ಬಿದಿರು ಒಂದು ದಿನ ಬ್ರಹ್ಮನಿಗೆ ಬೇಸರದಿಂದ ಕೇಳಿತಂತೆ, "ಬೇಕಿತ್ತೇ ಈ ನಿನ್ನ ಸೃಷ್ಟಿಯೊಳಗೆ ನನ್ನದೊಂದು ಪಾತ್ರ? ಹೂವಿಲ್ಲ, ಹಣ್ಣಿಲ್ಲ, ದಣಿದು ಬಂದವರಿಗೆ ನೆರಳು ನೀಡಲೂ ಆಗುವುದಿಲ್ಲ". ಬ್ರಹ್ಮ ನುಡಿದನಂತೆ – “ಯಾಕೆ ಸಾಧ್ಯವಿಲ್ಲ? ಮನಸ್ಸು ಮಾಡಿ ನೋಡು" ಬಿದಿರು ಹಠ ಹಿಡಿದು ಬೆಳೆಯಿತಂತೆ. ಕೃಷ್ಣನ ಕೈಯಲ್ಲಿ ಕೊಳಲಾಯಿತು, ಮಕ್ಕಳ ತೂಗುವ ತೊಟ್ಟಿಲಾಯಿತು, ಸುಮಂಗಲಿಯರ ಬಾಗಿನಕ್ಕೆ ಮೊರವಾಯಿತು, ಬಡವರ ಗುಡಿಸಲಿಗೆ ಗಳವಾಯಿತು, ಆರೋಗ್ಯಕ್ಕೆ ಔಷಧಿಯಾಯಿತು, ಮೋಕ್ಷದ ದಾರಿಯಲ್ಲಿ – ಅಂತಿಮ ಯಾತ್ರೆಯಲ್ಲಿ ನೆರವಾಯಿತು. ಬಿದಿರು ಎಲ್ಲರಿಗೂ ಬೇಕಾಯಿತು, ಮನಸ್ಸು ಮಾಡಿದರೆ ಯಾವ ಸಾಧನೆಯನ್ನೂ ಮಾಡಬಹುದು ಎಂದು ಲೋಕಕ್ಕೆ ಸಾರಿತು. ಹಾಗೆಯೇ ಮೋಟಮ್ಮನವರು ಮಹಿಳೆಯರಿಗೆ ಸ್ಫೂರ್ತಿಯ ಚಿಲುಮೆ, ಭರವಸೆಯ ಬೆಳಕು, ಮಾರ್ಗದರ್ಶಿ ಎಂದು ವಿಶ್ಲೇಷಿಸಿದ್ದಾರೆ.
©2024 Book Brahma Private Limited.