ಐಟಿ- ಬಿಟಿಯ ಕಾಲದಲ್ಲಿದ್ದರೂ, ಕ್ಷಣಮಾತ್ರಕ್ಕೆ ಜಗತ್ತಿನ ಅನೇಕ ಸಂಗತಿಗಳನ್ನು ಎಳೆದುಕೊಂಡು ಅಂಗೈಯೊಳಗೆ ಕೂರಿಸಿಕೊಳ್ಳುವ ಅವಕಾಶವಿದ್ದರೂ ಹೆಣ್ಣಿನ ಲೋಕವನ್ನು ಮಾತ್ರ ಅರಿವಿನ ಪರಿಧಿಯಿಂದ ಆಚೆಯೇ ಕೂರಿಸಲಾಗಿದೆ. ಇಂತಹ ಹೆಣ್ಣಿನ ಲೋಕವನ್ನು ‘ಬಾಳಂತಿ ಪುರಾಣ’ದಲ್ಲಿ ತೆರೆದಿಡಲಾಗಿದೆ. ಈ ಕೃತಿ ಬಾಣಂತನದ ಅರಿವು ಮೂಡಿಸುತ್ತಾ, ಆ ಅವಧಿಯ ಸಮಸ್ಯೆಗಳನ್ನು ಹೇಳುತ್ತಾ, ಅದಕ್ಕೆ ಪರಿಹಾರವನ್ನೂ ಕೊಡುತ್ತಾ, ಮಗುವಿನ ಜೊತೆಗೆ ಬೆರೆಯುವ ಸಂತಸಕ್ಕೂ ಸಾಕ್ಷಿಯಾಗುತ್ತದೆ. ಬಾಳಂತಿಗೆ ಯಾಕೆ ಬಿಸಿನೀರು ಹಾಕಲಾಗುತ್ತದೆ, ಸೊಂಟಕ್ಕೆ ಕಟ್ಟುವ ಬೆಲ್ಟ್ ಹೇಗೆ ಸಹಾಯಕ, ಬಾಳಂತಿಗೆ ಕೊಡುವ ಔಷಧ-ಆಹಾರಗಳೇನು, ಶಿಶುವಿನ ಆರೈಕೆ ಹೇಗೆ, ಮೊಲೆ ಹಾಲು ಕೊಡುವಾಗ ಆಗುವ ಸಮಸ್ಯೆಗಳೇನು.. ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಈ ಪುಸ್ತಕದಲ್ಲಿ ವಿವರವಾದ ನಿರೂಪಣೆ ಇದೆ. ಬಾಳಂತಿ-ಶಿಶುವಿನ ಆರೈಕೆ ಎನ್ನುವುದು ಆಯಾ ವಾತಾವರಣಕ್ಕೆ ಅನುಗುಣವಾಗಿ ಭಿನ್ನವಾಗಿ ನಡೆದರೂ, ಆಗಷ್ಟೇ ಮಗುವನ್ನು ಹೆತ್ತ ಹಸಿ ಮೈಯ ಹೆಣ್ಣಿನ ಆಂತರಿಕ ತೊಳಲಾಟಗಳು, ಗೊಂದಲಗಳು ಹೆಚ್ಚೂ-ಕಡಿಮೆ ಒಂದೇ. ’ಬಾಳಂತಿ ಪುರಾಣ’ದಲ್ಲಿ ಇವೆಲ್ಲವನ್ನೂ ಯಾತನೆಯಾಗಿಸುತ್ತಾ ಹೇಳದೆ ಬಹಳ ಲವಲವಿಕೆಯಿಂದ, ಅನುಭವಗಳ ನೆಲೆಗಟ್ಟಿನಲ್ಲಿ ತುಂಟತನದ ಜೊತೆಗೇ ಹೇಳಲಾಗಿದೆ. ಬಾಣಂತನದ ಬಗ್ಗೆ ವೈದ್ಯರೇ ಪುಸ್ತಕವನ್ನು ಬರೆದದ್ದು ಬಿಟ್ಟರೆ, ಖುದ್ದು ಬಾಳಂತಿಯೇ ಸವಿಸ್ತಾರವಾಗಿ ಅನುಭವಗಳನ್ನು ಕಟ್ಟಿಕೊಟ್ಟಿದ್ದಾರೆ.
©2024 Book Brahma Private Limited.