ಅಳು ನುಂಗಿ ನಗು ಒಮ್ಮೆ- ಪ್ರೊ. ಸಣ್ಣರಾಮ ಅವರ ಕೃತಿ. ನೋವು ಇನ್ನೊಂದು ಬಗೆಯ ವೇದನೆಯನ್ನು ನಮಗೆ ತಂದುಕೊಡುತ್ತದೆ. ಬರಹವೇ ಉಲ್ಲಾಸವಾಗುವ ಕಾಲವೊಂದಿದೆ. ಅದೊಂದು ರಸಾನುಭವ, ಅಥವಾ ದಿವ್ಯಾನುಭೂತಿಯನ್ನು ನೀಡುವುದೂ ಉಂಟು. ಆದರೆ, ಸಣ್ಣರಾಮ ಅವರ ಈ ಕೃತಿಯು ನೈಜ ಮತ್ತು ಕಟು ಅನುಭವವನ್ನು ನಿರೂಪಿಸುತ್ತ ಹೋಗುತ್ತದೆ. ಲೇಖಕನೊಬ್ಬ ಸಾಮಾಜಿಕಾನುಭವವನ್ನು ತನ್ನ ಅಂತರಂಗದ ಮೂಸೆಯಲ್ಲಿಟ್ಟು ಅದನ್ನು ಅಕ್ಷರೀಕರಣಗೊಳಿಸುವುದು ಒಂದು ಬಗೆಯಾದರೆ; ಅಂತರಂಗದ ತೊಳಲಾಟವನ್ನು ನಿರೂಪಿಸುವುದು ಇನ್ನೊಂದು ಬಗೆ. ಸ್ವಾನುಭವದ ಪರಿಪೇಕ್ಷ ಇದ್ದರೂ ಅವೆರಡೂ ಒಂದಕ್ಕೊಂದು ಮಿಳಿತವಾಗುತ್ತದೆ. ಆದರೆ, ಲೇಖಕನೊಬ್ಬನ ಅನುಭವವು ತನ್ನ ಕಣ್ಣಮುಂದೆಯೇ ನಡೆದುಹೋದ ಸಂಗತಿಗಳನ್ನು ಪರಿಮಾರ್ಶಿಸುವಾಗ ಆಗುವ ತಳಮಳ ಸಾಮಾಜಿಕಾನುಭವಕ್ಕಿಂತ ಭಿನ್ನವೂ ವಿಶಿಷ್ಟವೂ ಆಗುತ್ತದೆಂಬುದಕ್ಕೆ ಈ ಕೃತಿ ಉದಾಹರಣೆಯೆನಿಸುತ್ತದೆ.
ಈ ಕೃತಿಯು ಆತ್ಮಕಥನವೋ, ಇದ್ದಕ್ಕಿದ್ದಂತೆ ಬದುಕಿನಲ್ಲಿ ಘಟಿಸಿದ ಸಂಗತಿಯ ಕಥನದ ತಳಮಳವೋ? ಎಂಬ ಪ್ರಶ್ನೆಯನ್ನು ನಮ್ಮ ಮುಂದಿಡುತ್ತದೆ! ಇಂಥ ತಳಮಳವನ್ನು ಅನುಭವಿಸುವುದಾಗಲೀ, ಹೊರತಂದು ಜಗದ ಮುಂದೆ ಇಡುವುದಾಗಲೀ ನಿಜಕ್ಕೂ ಒಬ್ಬ ಲೇಖಕನಿಗೆ ಸವಾಲಾಗಿರುತ್ತದೆ. ಈ ಕೃತಿಯನ್ನು ಓದುತ್ತಿದ್ದಂತೆಯೇ ಕಣ್ಣುಹನಿಗೂಡುವುದು ಖಚಿತ. ಬಾಳ ಗೆಳತಿಯನ್ನು ಕಳೆದುಕೊಳ್ಳಬೇಕಾಗಿ ಬಂದ ಆ ನೋವಿನ ದಿನಗಳನ್ನು ಲೇಖಕರು ಅತ್ಯಂತ ಪರಿಣಾಮಕಾರಿಯಾಗಿ ಅಕ್ಷರಗಳಲ್ಲಿ ಹಿಡಿದಿಟ್ಟಿದ್ದಾರೆ. ಮನುಷ್ಯನಿಗೆ ಅಚಾನಕವಾಗಿ ಆವರಿಸಿಕೊಳ್ಳುವ ರೋಗ ರುಜಿನಿಗಳು, ಅವುಗಳಿಂದ ಮುಕ್ತನಾಗಲು ಅವನು (ಅವಳು) ಪಡುವ ಬವಣೆ, ಮಾನಸಿಕ ವೇದನೆ, ನೋವು ಹತಾಶೆ, ಯಾವುದೊ ಒಂದು ಮುದ್ದು, ಮೂಲಿಕೆಯಿಂದ ರೋಗಿ ಚೇತರಿಸಿಕೊಂಡಂತೆ ಕಂಡು ಬಂದಾಗ, ಕ್ಷಣ ಕಾಲ ಉಂಟಾಗುವ ಆನಂದದ ಮಿಂಚಿನ ಸಂಚಾರದ ಅನುಭವ, ರೋಗ ಉಲ್ಬಣಿಸಿದ ಮರುಗಳಿಗೆಯಲ್ಲೆ ಮತ್ತೆ ಅದೇ ತಳಮಳ, ಕಿನ್ನತೆ. ಹೀಗೆ ರೋಗಿ ಮತ್ತು ರೋಗಿಯನ್ನೇ ನಂಬಿ ಅವಲಂಭಿಸಿ ಬದುಕುವ ಒಡನಾಡಿ ಇವರಿಬ್ಬರ ಮನಸ್ಥಿತಿಯ ಸಂಕಟದ ಒಟ್ಟು ಮೊತ್ತವೇ ಡಾ.ಸಣ್ಣರಾಮರವರ ಕೃತಿಯ ತಿರುಳು. ಯಾವುದೇ ರೋಗ ಅಷ್ಟಿಷ್ಟು ಸುಳಿವು ನೀಡುವುದರ ಮೂಲಕವೇ ದೇಹದಲ್ಲಿ ಸೇರಿ ಕೋಳ್ಳುತ್ತದೆ. ಅಂತಹ ಸಂದರ್ಭದಲ್ಲಿ ತಾತ್ಸರ ಮಾಡದೇ ಪ್ರಾರಂಭದ ಹಂತದಲ್ಲಿಯೇ ಚಿಕಿತ್ಸೆ ಪಡೆಯುವುದರಿಂದ, ರೋಗಕ್ಕೆ ಬಲಿಯಾಗುವ ಜೀವವನ್ನು ಉಳಿಸಿಕೊಳ್ಳಬಹುದು ಎಂಬ ಸಂದೇಶವನ್ನು ಹೊತ್ತ ಈ ಕೃತಿ ಲೇಖಕರ ಮನಸ್ಸರ್ಯದ ಪ್ರತೀಕವೂ ಆಗಿದೆ.
©2024 Book Brahma Private Limited.